ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ನಡೆದ ನೋ ಬಾಲ್ ವಿವಾದ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯದ ವೇಳೆ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಹಾಗೂ ಮೈದಾನಕ್ಕೆ ಬಂದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ವರ್ತನೆಯನ್ನು ಐಪಿಎಲ್ ಆಡಳಿತ ಮಂಡಳಿ ಖಂಡಿಸಿದೆ.
ಐಪಿಎಲ್ ನಿಯಮ ಉಲ್ಲಂಘನೆ ಕಾರಣಕ್ಕೆ ರಿಷಭ್‌ಗೆ ಪಂದ್ಯದ ಸಂಭಾವನೆಯ ಶೇ 100 ರಷ್ಟು ದಂಡವನ್ನು ವಿಧಿಸಿದ್ದರೆ, ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಒಂದು ಪಂದ್ಯಕ್ಕೆ ನಿಷೇಧ ವಿಧಿಸಲಾಗಿದೆ.
ಆಮ್ರೆ ಅವರಿಗೆ ಒಂದು ಪಂದ್ಯದ ನಿಷೇಧದ ಜೊತೆಗೆ ಪಂದ್ಯದ ಸಂಭಾವನೆಯ ಶೇ 100 ರಷ್ಟು ದಂಡ ವಿಧಿಸಲಾಗಿದೆ. ವೇಗಿ ಶಾರ್ದೂಲ್ ಠಾಕೂರ್‌ಗೆ ಪಂದ್ಯದ ಸಂಭಾವನೆಯ ಶೇ 50 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಸ್ಥಾನ ರಾಯಲ್ಸ್ ನೀಡಿದ್ದ 223 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡದ ಗೆಲುವಿಗೆ ಅಂತಿಮ ಓವರ್‌ನಲ್ಲಿ 36 ರನ್‌ಗಳ ಅಗತ್ಯವಿತ್ತು. ಒಬೇದ್ ಮೆಕಾಯ್ ಎಸೆದ ಈ ಓವರ್ ಮೊದಲ ಮೂರು ಎಸೆತಗಳನ್ನು ರೋವ್ಮನ್ ಪೊವೆಲ್ ಸಿಕ್ಸರ್ ಸಿಡಿಸಿದರು. ಆದರೆ, ಮೂರನೇ ಎಸೆತ ಸೊಂಟದ ಭಾಗಕ್ಕಿಂತಲೂ ಮೇಲಿದೆ ಇದು ನೋ ಬಾಲ್ ಎಂದು ಪೊವೆಲ್ ವಾದಿಸಿದರು. ಅಂಪೈರ್ ನೋ ಬಾಲ್ ನೀಡಿರಲಿಲ್ಲ. ಕೂಡಲೇ ಸಿಟ್ಟಿಗೆದ್ದ ನಾಯಕ ರಿಷಭ್ ಪಂತ್, ರೋವ್ಮನ್ ಪೊವೆಲ್ ಹಾಗೂ ಕುಲದೀಪ್ ಯಾದವ್ ಅವರನ್ನು ಪೆವಿಲಿಯನ್‌ಗೆ ಹಿಂದಿರುಗುವಂತೆ ಸೂಚನೆ ನೀಡಿದರು.
ಪಂತ್ ಇದೇ ಸಂದರ್ಭದಲ್ಲಿ ತಂಡದ ಸಹಾಯಕ ಕೋಚ್ ಪ್ರವೀಣ್ ಅವರನ್ನು ಮೈದಾನಕ್ಕೆ ತೆರಳಿ ಅಂಪೈರ್ ಜೊತೆಗೆ ಚರ್ಚಿಸುವಂತೆ ಕಳುಹಿಸಿದ್ದರು. ಆದರೆ, ಆನ್ ಫೀಲ್ಡ್‌ನಲ್ಲಿದ್ದ ಅಂಪೈರ್‌ಗಳು ನೋ ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣಕ್ಕೆ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಆಟ ಮುಂದುವರಿಸುವಂತೆ ಸೂಚಿಸಿದ್ದರು.
ಅಂತಿಮವಾಗಿ ಡೆಲ್ಲಿ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 18 ರನ್ ಅಗತ್ಯವಿತ್ತು. ಆದರೆ, ಪೊವೆಲ್, ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ 15 ರನ್ ಅಂತರದಿಂದ ಗೆಲುವು ಸಾಧಿಸಿತು.
ನೋ ಬಾಲ್ ಕುರಿತು ಅಂಪೈರ್‌ಗಳ ತೀರ್ಮಾನ ಮತ್ತು ರಿಷಭ್ ಪಂತ್ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಓದಿ...ಮಗುವಿನ ನಿರೀಕ್ಷೆಯಲ್ಲಿ ಅಮೃತಾ –ರೂಪೇಶ್ ದಂಪತಿ: ಬೇಬಿ ಬಂಪ್ ಫೋಟೊ ವೈರಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.