ADVERTISEMENT

IPL 2022 RR vs KKR: ಬಟ್ಲರ್ ಸೆಂಚುರಿ, ಚಾಹಲ್ ಹ್ಯಾಟ್ರಿಕ್; ರಾಜಸ್ಥಾನ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2022, 18:24 IST
Last Updated 18 ಏಪ್ರಿಲ್ 2022, 18:24 IST
   

ಮುಂಬೈ: ಜೋಸ್ ಬಟ್ಲರ್ ಅಮೋಘ ಶತಕ (103) ಹಾಗೂ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ (85) ಹೋರಾಟ ವ್ಯರ್ಥವೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಬಟ್ಲರ್ ಶತಕದ (103) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 217 ರನ್ ಪೇರಿಸಿತ್ತು.

ಬಳಿಕ ಚಾಹಲ್ ಮ್ಯಾಜಿಕ್ ಮೋಡಿಗೆ ನಲುಕಿದ ಕೆಕೆಆರ್ 19.4 ಓವರ್‌ಗಳಲ್ಲಿ 210 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹಾಗೂ ಐದು ವಿಕೆಟ್ ಸಾಧನೆ ಮಾಡಿದರು.

ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್‌ಗೆ ಆರಂಭದಲ್ಲೇ ಸುನಿಲ್ ನಾರಾಯಣ್ (0) ರೂಪದಲ್ಲಿ ಆಘಾತ ಎದುರಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ಆ್ಯರನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಿದರು.

ದಿಟ್ಟ ಉತ್ತರ ನೀಡಿದ ಫಿಂಚ್-ಅಯ್ಯರ್, ರಾಜಸ್ಥಾನ್ ಬೌಲರ್‌ಗಳ ಮೇಲೆ ಒತ್ತಡ ಸೃಷ್ಟಿಸಿದರು. ಫಿಂಚ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಆದರೆ ಫಿಫ್ಟಿ ಬೆನ್ನಲ್ಲೇ ಔಟ್ ಆದರು. ಆಗಲೇ ಅಯ್ಯರ್ ಜೊತೆಗೆ ದ್ವಿತೀಯ ವಿಕೆಟ್‌ಗೆ 53 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟ ಕಟ್ಟಿದರು.

ಅತ್ತ ಆಕ್ರಮಣಕಾರಿ ಆಟ ಮುಂದುವರಿಸಿದ ಅಯ್ಯರ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮ 10 ಓವರ್‌ಗಳಲ್ಲಿ ಕೆಕೆಆರ್ ಗೆಲುವಿಗೆ 102 ರನ್‌ಗಳ ಅಗತ್ಯವಿತ್ತು.

ಈ ನಡುವೆ ನಿತೀಶ್ ರಾಣಾ (18) ಹಾಗೂ ಆ್ಯಂಡ್ರೆ ರಸೆಲ್ (0) ವಿಕೆಟ್ ನಷ್ಟವಾಯಿತು.

ಇನ್ನೊಂದೆಡೆ ಅಯ್ಯರ್ ದಿಟ್ಟ ಹೋರಾಟ ಮುಂದುವರಿಸಿದರು. ಆದರೆ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಚಾಹಲ್ ರಾಜಸ್ಥಾನ್ ಗೆಲುವಿಗೆ ಕಾರಣವಾದರು.

ವೆಂಕಟೇಶ್ ಅಯ್ಯರ್ (6), ಶ್ರೇಯಸ್ ಅಯ್ಯರ್, ಶಿವಂ ಮಾವಿ (0) ಹಾಗೂ ಪ್ಯಾಟ್ ಕಮಿನ್ಸ್ (0) ಚಾಹಲ್ ಬಲೆಗೆ ಬಿದ್ದರು. 51 ಎಸೆತಗಳನ್ನು ಎದುರಿಸಿದ ಅಯ್ಯರ್ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಔಟ್ ಆದರು.

ಕೊನೆಯವರಾಗಿ ಔಟ್ ಆದ ಉಮೇಶ್ ಯಾದವ್ (21 ರನ್, 9 ಎಸೆತ, 1 ಬೌಂಡರಿ, 2 ಸಿಕ್ಸರ್) ಗೆಲುವಿಗಾಗಿ ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ಎಡವಿದರು.

ರಾಜಸ್ಥಾನ್ ಪರ ಚಾಹಲ್ 40 ರನ್ ತೆತ್ತು ಐದು ವಿಕೆಟ್ ಕಬಳಿಸಿದರು. ಕೊನೆಯ ಓವರ್‌ನಲ್ಲಿ ಮೆಕಾಯ್ ಎರಡು ವಿಕೆಟ್ ಕಬಳಿಸಿದರು.

ಬಟ್ಲರ್ ಶತಕದ ಅಬ್ಬರ...

ಈ ಮೊದಲು ಜೋಸ್ ಬಟ್ಲರ್ ಶತಕದ (103) ವೈಭವದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಐದು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್‌ಗೆ ಓಪನರ್‌ಗಳಾದ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ಬಿರುಸಿನ ಆರಂಭವೊದಗಿಸಿದರು. ದೇವದತ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಬಟ್ಲರ್, ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.

ಬಟ್ಲರ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ಪಡಿಕ್ಕಲ್ (24) ಜೊತೆಗೆ ಮೊದಲ ವಿಕೆಟ್‌ಗೆ 56 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಬಳಿಕ ನಾಯಕ ಸಂಜು ಸ್ಯಾಮ್ಸನ್ ಜೊತೆಗೂಡಿದ ಬಟ್ಲರ್ ಮತ್ತಷ್ಟು ಬಿರುಸಾಗಿ ಬ್ಯಾಟ್ ಬೀಸಿದರು. ಸಂಜು-ಬಟ್ಲರ್ ಅಬ್ಬರದ ಮುಂದೆ ಕೆಕೆಆರ್ ಬೌಲರ್‌ಗಳ ಬಳಿ ಉತ್ತರವೇ ಇರಲಿಲ್ಲ.

ಬಟ್ಲರ್ ಹಾಗೂ ಸಂಜು ಎರಡನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ಕಟ್ಟಿದರು. 18 ಎಸೆತಗಳನ್ನು ಎದುರಿಸಿದ ಸ್ಯಾಮ್ಸನ್ 38 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಅತ್ತ ಕೆಚ್ಚೆದೆಯ ಆಟ ಪ್ರದರ್ಶಿಸಿದ ಬಟ್ಲರ್ 59 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಎರಡನೇ ಹಾಗೂ ಒಟ್ಟಾರೆಯಾಗಿ ಐಪಿಎಲ್ ವೃತ್ತಿ ಜೀವನದಲ್ಲಿಮೂರನೇ ಶತಕ ಗಳಿಸಿದರು.

61 ಎಸೆತಗಳನ್ನು ಎದುರಿಸಿದ ಬಟ್ಲರ್ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 103 ರನ್ ಗಳಿಸಿದರು. ಈ ಮೂಲಕ ರಾಜಸ್ಥಾನ್ ಐದುವಿಕೆಟ್ ನಷ್ಟಕ್ಕೆ 217 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಶಿಮ್ರಾನ್ ಹೆಟ್ಮೆಯರ್ ಸಹ ಅಜೇಯ 26 ರನ್ (13 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿ ಮಿಂಚಿದರು.ಕೆಕೆಆರ್ ಪರ ಪ್ರಭಾವಿ ಎನಿಸಿದಸುನಿಲ್ ನಾರಾಯಣ್ 21 ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು.

ಕೆಕೆಆರ್ ಫೀಲ್ಡಿಂಗ್:
ಈ ಮೊದಲುಟಾಸ್ ಗೆದ್ದಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇಯಿಂಗ್ ಇಲೆವೆನ್:


ಟಾಸ್ ಮಾಹಿತಿ...

ಇತ್ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ ಮಿಶ್ರ ಫಲವನ್ನು ಕಂಡಿವೆ.

ಕೋಲ್ಕತ್ತ ನೈಟ್ ರೈಡರ್ಸ್ ಈವರೆಗೆ ಆಡಿರುವ ಪಂದ್ಯಗಳಲ್ಲಿ ಪೈಕಿ ಮೂರರಲ್ಲಿ ಗೆದ್ದಿದ್ದು ಮೂರರಲ್ಲಿ ಸೋತಿದೆ. ಅತ್ತ ರಾಯಲ್ಸ್ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು ಎರಡರಲ್ಲಿ ಸೋತಿವೆ.

ಹಾಗಾಗಿ ಕೋಲ್ಕತ್ತ ಹಾಗೂ ರಾಜಸ್ಥಾನ್ ನಡುವೆ ಬ್ರೆಬೋರ್ನ್ ಮೈದಾನದಲ್ಲಿ ನಿಕಟ ಹಣಾಹಣಿಯನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.