ಮುಂಬೈ: ಐಪಿಎಲ್ 2022ರಲ್ಲಿ ಮೊದಲ ನಾಲ್ಕೂ ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಕಷ್ಟು ಟೀಕೆಗೆ ಒಳಗಾಗಿದೆ. ಅದರಲ್ಲೂ ವಯಸ್ಕರ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದೆ.
ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 23 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸುವ ಮೂಲಕ ಎದುರಾಳಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಪ್ರತಿಭೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಿಎಸ್‌ಕೆ ಆಟಗಾರರು ಸಾಬೀತು ಮಾಡಿದ್ದಾರೆ. 36 ವರ್ಷದ ಅಂಬಟಿ ರಾಯುಡು ಡೈವ್ ಹೊಡೆದು ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.
ಸ್ಪಿನ್ನರ್ ರವೀಂದ್ರ ಜಡೇಜ ದಾಳಿಯಲ್ಲಿ ಆರ್‌ಸಿಬಿ ಬ್ಯಾಟರ್ ಆಕಾಶ್ ದೀಪ್ ಹೊಡೆದ ಚೆಂಡನ್ನು ಗಾಳಿಯಲ್ಲಿ ಹಾರಿ ರಾಯುಡು ಒಂದೇ ಕೈಯಲ್ಲಿ ಅದ್ಭುತವಾಗಿ ಹಿಡಿಯುವ ಮೂಲಕ ಗಮನ ಸೆಳೆದರು. ಪರಿಣಾಮ ಆಕಾಶ್ ದೀಪ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಇದೇ ಪಂದ್ಯದಲ್ಲಿ 36 ವರ್ಷದ ರಾಬಿನ್ ಉತ್ತಪ್ಪ ಕೇವಲ 50 ಎಸೆತಗಳಲ್ಲಿ 88 ರನ್ ಗಳಿಸುವ ಮೂಲಕ ಚೆನ್ನೈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉತ್ತಪ್ಪ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂಬತ್ತು ಸಿಕ್ಸರ್‌ಗಳು ಸೇರಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.