ಮುಂಬೈ: ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಶತಕದ ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಉತ್ಸಾಹ ಪುಟಿದೆಬ್ಬಿಸಿತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್‌ಸಿಬಿ ಪರ ಉತ್ತಮ ಮೊತ್ತ ಕಲೆ ಹಾಕಲು ಇವರ ಆಟ ನೆರವಾಯಿತು. ನಿಗದಿತ ಓವರ್‌ನಲ್ಲಿ ಸಿಎಸ್‌ಕೆ 4 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು.
ಮಂಗಳವಾರ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್‌ಸಿಬಿಯ ಫಫ್ ಡು ಪ್ಲೆಸಿ ಬೌಲಿಂಗ್ ಆಯ್ಕೆ ಮಾಡಿಕೊಂಡು, ರವೀಂದ್ರ ಜಡೇಜ ಮುಂದಾಳತ್ವದ ಸಿಎಸ್‌ಕೆಗೆಬ್ಯಾಟಿಂಗ್ ಅವಕಾಶ ನೀಡಿದರು. ಉತ್ತಪ್ಪ ಮತ್ತು ಶಿವಂ ಅಂಗಳದಲ್ಲಿ ಸಿಕ್ಸರ್ ಮಳೆಗರೆದರು. ಇಬ್ಬರು 165 ರನ್ ದಾಖಲೆಯ ಜೊತೆಯಾಟದ ಮೂಲಕ ತಂಡದ ಸ್ಕೋರ್ 200 ರನ್ ಗಡಿ ದಾಟಿಸಿದರು.
50 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ 9 ಸಿಕ್ಸರ್, 4 ಬೌಂಡರಿ ಸೇರಿ 88 ರನ್ ಸಿಡಿಸಿದರು. ಹಸರಂಗ ಓವರ್‌ನಲ್ಲಿ ಕ್ಯಾಚ್ ಕೊಟ್ಟು ಆಟ ಮುಗಿಸಿದರು. ಅನಂತರವೂ ಶಿವಂ ದುಬೆ ಸಿಕ್ಸರ್ ಹೊಡೆತಗಳನ್ನು ಮುಂದುವರಿಸಿದರು. 46 ಎಸೆತಗಳಲ್ಲಿ 95ರನ್ ಬಾರಿಸಿದರು.
ಸಿಎಸ್‌ಕೆ ಕಲೆಹಾಕಿರುವ 216 ರನ್‌ಗಳಲ್ಲಿ 12 ಫೋರ್, 17 ಸಿಕ್ಸರ್‌ಗಳು ಸೇರಿವೆ. ಆರ್‌ಸಿಬಿಯ ಆಕಾಶ್ ದೀಪ್ ಅತಿ ಹೆಚ್ಚು 58 ರನ್ ಕೊಟ್ಟು, ದುಬಾರಿ ಬೌಲರ್ ಎನಿಸಿದರು. ಹಸರಂಗ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಸಿಎಸ್‌ಕೆಯ ಅಂತಿಮ ಹಂತದ ರನ್ ಓಘಕ್ಕೆ ತಡೆಯಾದರು.
ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕವಾಡ್ ಮತ್ತು ರಾಬಿನ್ ಉತ್ತಪ್ಪ ಉತ್ತಮ ಆರಂಭ ನೀಡುವ ವಿಶ್ವಾಸ ಮೂಡಿಸಿದರು. ಆದರೆ, ತಂಡ 19 ರನ್ ಗಳಿಸುವಷ್ಟರಲ್ಲಿ ಮೂರು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಗಾಯಕವಾಡ್ (17 ರನ್) ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆರನೇ ಓವರ್‌ನಲ್ಲಿ ಸುಯಶ್ ಪ್ರಭುದೇಸಾಯಿ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟಕ್ಕೆ ಮೋಯಿನ್ ಅಲಿ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ–ಮುಂಬೈಗೆ ಮೊದಲ ಜಯದ ತವಕ
ಆರ್‌ಸಿಬಿ ಮತ್ತು ಸಿಎಸ್‌ಕೆ 28 ಬಾರಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 18 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆರ್‌ಸಿಬಿ 9 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.