ADVERTISEMENT

IPL 2022 RCB vs DC: ಕಾರ್ತಿಕ್, ಮ್ಯಾಕ್ಸ್‌ವೆಲ್ ಅಬ್ಬರ; ಆರ್‌ಸಿಬಿಗೆ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2022, 18:12 IST
Last Updated 16 ಏಪ್ರಿಲ್ 2022, 18:12 IST
   

ಮುಂಬೈ: ಗ್ಲೆನ್ ಮ್ಯಾಕ್ಸ್‌ವೆಲ್ (55) ಹಾಗೂ ದಿನೇಶ್ ಕಾರ್ತಿಕ್ (66*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 16 ರನ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಜಯದೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅತ್ತ ಡೆಲ್ಲಿ ಐದು ಪಂದ್ಯಗಳಲ್ಲಿ ಮೂರನೇ ಸೋಲಿಗೆ ಶರಣಾಗಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು, ಮ್ಯಾಕ್ಸ್‌ವೆಲ್ ಹಾಗೂ ಕಾರ್ತಿಕ್ ಬಿರುಸಿನ ಅರ್ಧಶತಕಗಳ ಬಲದಿಂದ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು.

ADVERTISEMENT

ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ, ಡೇವಿಡ್ ವಾರ್ನರ್ ಹೋರಾಟದ ಹೊರತಾಗಿಯೂ ಏಳು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಚೇಸಿಂಗ್ ವೇಳೆ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ (16) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 50 ರನ್ ಪೇರಿಸಿದರು.

ಬಳಿಕ ಮಿಶೆಲ್ ಮಾರ್ಶ್ ಜೊತೆ ಸೇರಿದ ವಾರ್ನರ್, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಕೇವಲ 29 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು.

ಈ ಮೂಲಕ ಐಪಿಎಲ್‌ನಲ್ಲಿ ದಾಖಲೆಯ 52ನೇ ಅರ್ಧಶತಕ ಗಳಿಸಿದರು.

ಈ ನಡುವೆ ವಾರ್ನರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ವನಿಂದು ಹಸರಂಗ ಪಂದ್ಯಕ್ಕೆ ಮಹತ್ವದ ತಿರುವನ್ನು ನೀಡಿದರು. 38 ಎಸೆತಗಳನ್ನು ಎದುರಿಸಿದ ವಾರ್ನರ್ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನಿಂದ 66 ರನ್ ಗಳಿಸಿದರು.

ಬೆನ್ನಲ್ಲೇ ಮಿಶೆಲ್ ಮಾರ್ಶ್ (14), ರೋವ್‌ಮ್ಯಾನ್ ಪೊವೆಲ್ (0), ಲಲಿತ್ ಯಾದವ್‌ರನ್ನು (1) ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ಡೆಲ್ಲಿ 115ಕ್ಕೆ ಐದು ವಿಕೆಟ್ ಕಳೆದುಕೊಂಡಿತು.

ನಾಯಕ ರಿಷಭ್ ಪಂತ್ 17 ಎಸೆತಗಳಲ್ಲಿ 34 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಬ್ಬರಿಸಿದರೂ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಹೊರದಬ್ಬಿದರು. ಇದರೊಂದಿಗೆ ಡೆಲ್ಲಿ ಗೆಲುವಿನ ಆಸೆ ಕಮರಿತು.

ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ ಮೂರು ಹಾಗೂ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಗಳಿಸಿದರು.

ಮ್ಯಾಕ್ಸ್‌ವೆಲ್, ಕಾರ್ತಿಕ್ ಸ್ಫೋಟಕ ಆಟ...

ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ತಂಡವು 40 ರನ್ ಗಳಿಸುವಷ್ಟರಲ್ಲಿ ನಾಯಕ ಫಫ್ ಡುಪ್ಲೆಸಿ (8), ವಿರಾಟ್ ಕೊಹ್ಲಿ (12) ಹಾಗೂ ಅನುಜ್ ರಾವತ್ (0) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ಕೌಂಟರ್ ಅಟ್ಯಾಕ್ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೆ ಸುಯಶ್ ಪ್ರಭುದೇಸಾಯಿ (6) ನಿರಾಸೆ ಮೂಡಿಸಿದರು.

ಇನ್ನೊಂದೆಡೆ ಬಿರುಸಿನ ಆಟವಾಡಿದ ಮ್ಯಾಕ್ಸ್‌ವೆಲ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 34 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.

ಇನ್ನಿಂಗ್ಸ್‌ನ ಕೊನೆಯಲ್ಲಿ ಶಹಬಾಜ್ ಅಹ್ಮದ್ ಜೊತೆ ಸೇರಿದ ದಿನೇಶ್ ಕಾರ್ತಿಕ್ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಮಗದೊಮ್ಮೆ ತಾವೊಬ್ಬ 'ಫಿನಿಶರ್' ಎಂಬುದನ್ನು ಸಾಬೀತು ಮಾಡಿದ ಕಾರ್ತಿಕ್, ಡೆಲ್ಲಿ ಬೌಲರ್‌ಗಳನ್ನು ದಂಡಿಸಿದರು.

ಅಲ್ಲದೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಪೈಕಿ ಮುಸ್ತಾಫಿಜುರ್ ರೆಹಮಾನ್ ಅವರ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿದಂತೆ 28 ರನ್ ಸೊರೆಗೈದರು.

ಕಾರ್ತಿಕ್ ಹಾಗೂ ಶಹಬಾಜ್ ಮುರಿಯದಆರನೇ ವಿಕೆಟ್‌ಗೆ 97 ರನ್ (55 ಎಸೆತ) ಜೊತೆಯಾಟದಲ್ಲಿ ಭಾಗಿಯಾದರು. 34 ಎಸೆತಗಳನ್ನು ಎದುರಿಸಿದ ಕಾರ್ತಿಕ್ ತಲಾ ಐದು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 66 ರನ್ ಗಳಿಸಿ ಔಟಾಗದೆ ಉಳಿದರು.

ಕಾರ್ತಿಕ್‌ಗೆ ಉತ್ತಮ ಸಾಥ್ ನೀಡಿದ ಶಹಬಾಜ್ 21 ಎಸೆತಗಳಲ್ಲಿ 32 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.

ಡೆಲ್ಲಿ ಫೀಲ್ಡಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಹರ್ಷಲ್ ಪಟೇಲ್ ಪುನರಾಗಮನ ಮಾಡಿಕೊಂಡಿದ್ದು, ಆರ್‌ಸಿಬಿ ತಂಡಕ್ಕೆ ಬಲ ತುಂಬಲಿದ್ದಾರೆ.

ಮೊದಲ ಪಂದ್ಯದ ಸೋಲಿನ ನಂತರ ಸತತಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ್ದ ಫಫ್ ಡುಪ್ಲೆಸಿ ನಾಯಕತ್ವದ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಣಿದಿತ್ತು. ಈಗ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.

ಅತ್ತ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು ಹಾಗೂ ಗೆಲುವು ದಾಖಲಿಸಿರುವ ಡೆಲ್ಲಿ ಸಿಹಿ-ಕಹಿಯನ್ನು ಅನುಭವಿಸಿದೆ. ಈಗ ಬೆಂಗಳೂರು ವಿರುದ್ಧ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.