ADVERTISEMENT

IPL 2022 RCB vs RR: ರಾಜಸ್ಥಾನಕ್ಕೆ ಮಣಿದ ಚಾಲೆಂಜರ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2022, 18:34 IST
Last Updated 26 ಏಪ್ರಿಲ್ 2022, 18:34 IST
ವಿಕೆಟ್ ಗಳಿಸಿದ ಕುಲದೀಪ್ ಸೇನ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಪಿಟಿಐ ಚಿತ್ರ
ವಿಕೆಟ್ ಗಳಿಸಿದ ಕುಲದೀಪ್ ಸೇನ್ ಅವರನ್ನು ಅಭಿನಂದಿಸಿದ ಸಹ ಆಟಗಾರರು –ಪಿಟಿಐ ಚಿತ್ರ   

ಪುಣೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್‌ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇದರಿಂದಾಗಿ ಬೌಲರ್‌ಗಳ ಅಮೋಘ ಆಟವು ವ್ಯರ್ಥವಾಯಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡವು 29 ರನ್‌ಗಳಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋತಿತು. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕಿಳಿಯಿತು.

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಅಸ್ಸಾಂ ಹುಡುಗ (ಔಟಾಗದೆ 56; 31ಎ) ಅರ್ಧಶತಕದ ಬಲದಿಂದ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 144 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ರಾಯಲ್ಸ್‌ ವೇಗಿ ಕುಲದೀಪ್ ಸೇನ್ (20ಕ್ಕೆ4), ಅನುಭವಿ ಸ್ಪಿನ್ನರ್ ಅಶ್ವಿನ್ (17ಕ್ಕೆ3) ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ (23ಕ್ಕೆ2) ತಡೆಯೊಡ್ಡಿದರು. ಪ್ರಮುಖ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ 19.3 ಓವರ್‌ಗಳಲ್ಲಿ 115 ರನ್ ಗಳಿಸಿ ಆಲೌಟ್ ಆಯಿತು.

ADVERTISEMENT

ಪ್ರಸಿದ್ಧಗೆ ವಿರಾಟ್ ವಿಕೆಟ್: ಕಳೆದೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ಈ ಪಂದ್ಯದಲ್ಲಿ ಫಫ್ ಡುಪ್ಲೆಸಿ ಜೊತೆಗೆ ಇನಿಂಗ್ಸ್‌ ಆರಂಭಿಸಿದರು. ಆದರೆ ಅದೃಷ್ಟ ಮತ್ತೊಮ್ಮೆ ಅವರಿಗೆ ಕೈಕೊಟ್ಟಿತು. 10 ಎಸೆತಗಳನ್ನು ಎದುರಿಸಿ 9 ರನ್ ಗಳಿಸಿದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಬೆಂಗಳೂರಿನ ಪ್ರಸಿದ್ದ ಹಾಕಿದ ಎಸೆತದಲ್ಲಿ ಫೀಲ್ಡರ್ ರಿಯಾನ್‌ಗೆ ಸುಲಭ ಕ್ಯಾಚ್ ಆದರು. ತುಸು ಹೋರಾಟ ತೋರಿದ ಫಫ್ (23) ಅವರನ್ನು ಏಳನೇ ಓವರ್‌ನಲ್ಲಿ ಕುಲದೀಪ್ ಸೇನ್ ಬೌಲಿಂಗ್‌ನಲ್ಲಿ ಬಟ್ಲರ್‌ಗೆ ಕ್ಯಾಚಿತ್ತರು. ನಂತರದ ಎಸೆತದಲ್ಲಿಯೇ ಗ್ಲೆನ್‌ ಮ್ಯಾಕ್ಸ್‌ವೆಲ್ ಔಟಾದರು.

ಇದಾದ ಮೇಲೆ ಬಂದ ಬ್ಯಾಟರ್‌ಗಳಲ್ಲಿ ಶಾಬಾಜ್ ಅಹಮದ್ (17) ಮತ್ತು ವಣಿಂದು ಹಸರಂಗಾ (18) ಅವರಿಬ್ಬರನ್ನು ಬಿಟ್ಟರೆ ಉಳಿದವರು, ಉಳಿದವರು ಎರಡಂಕಿ ಮೊತ್ತ ತಲುಪಲಿಲ್ಲ.

ಗೌರವ ಕಾಪಾಡಿದ ಪರಾಗ್:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಸ್ವಿಂಗ್ ದಾಳಿಗೆ ಕುಸಿಯಬೇಕಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ಗೌರವವನ್ನು ರಿಯಾನ್ ಪರಾಗ್ ಕಾಪಾಡಿದರು. ಆರಂಭಿಕ ದೇವದತ್ತ ಪಡಿಕ್ಕಲ್ ಮತ್ತುಈ ಸಲದ ಟೂರ್ನಿಯಲ್ಲಿ ಮೂರು ಶತಕ ಬಾರಿಸಿರುವ ಜೊಸ್ ಬಟ್ಲರ್ (8 ರನ್) ಇಲ್ಲಿ ಮಿಂಚಲಿಲ್ಲ.

ತಂಡವು ಕೇವಲ 68 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ರಿಯಾನ್ ಪರಾಗ್ ಒಬ್ಬರೇ ಬೌಲರ್‌ಗಳಿಗೆ ದಿಟ್ಟ ಉತ್ತರ ಕೊಟ್ಟರು.ಅವರ ಆಟದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ದಾಖಲಾದವು. 16ನೇ ಓವರ್‌ನಲ್ಲಿ ಡೆರಿಲ್ ವಿಕೆಟ್ ಕಬಳಿಸಿದ ಹ್ಯಾಜಲ್‌ವುಡ್ ಜೊತೆಯಾಟ ಮುರಿದರು. ಇದರ ನಂತರ ಒಂದು ಕಡೆ ಬ್ಯಾಟರ್‌ಗಳು ಔಟಾಗುತ್ತಿದ್ದರೂ, ರಿಯಾನ್ ಮಾತ್ರ ದಿಟ್ಟತನದಿಂದ ಬ್ಯಾಟ್ ಬೀಸಿದರು.19ನೇ ಓವರ್‌ನಲ್ಲಿ ರಿಯಾನ್ ಕೈಚೆಲ್ಲಿದ ಹಸರಂಗಾ ಜೀವದಾನ ನೀಡಿದರು.

ಸ್ಕೋರ್‌...

ರಾಜಸ್ಥಾನ ರಾಯಲ್ಸ್‌ 8ಕ್ಕೆ 144 (20 ಓವರ್)

ಬಟ್ಲರ್‌ ಸಿ ಸಿರಾಜ್ ಬಿ ಹೇಜಲ್‌ವುಡ್ 8 (9 ಎ, 4x1), ದೇವದತ್ತ ಎಲ್‌ಬಿಡಬ್ಲ್ಯು ಬಿ ಸಿರಾಜ್ 7 (7 ಎ, 6x1), ರವಿಚಂದ್ರನ್ ಸಿ ಮತ್ತು ಬಿ ಸಿರಾಜ್ 17 (9 ಎ, 4x4), ಸಂಜು ಬಿ ಹಸರಂಗ 27 (21 ಎ, 4x1, 6x3), ಮಿಚೆಲ್ ಸಿ ಮ್ಯಾಕ್ಸ್‌ವೆಲ್ ಬಿ ಹೇಜಲ್‌ವುಡ್ 16 (24 ಎ), ರಿಯಾನ್ ಔಟಾಗದೆ 56 (31 ಎ, 4x3, 6x4), ಹೆಟ್ಮೆಯರ್ ಸಿ ಪ್ರಭುದೇಸಾಯಿ ಬಿ ಹಸರಂಗ 3 (7 ಎ), ಬೌಲ್ಟ್‌ ಸಿ ಕೊಹ್ಲಿ ಬಿ ಹರ್ಷಲ್ 5 (7 ಎ), ಪ್ರಸಿದ್ಧ ರನ್ ಔಟ್ (ಪ್ರಭುದೇಸಾಯಿ) 2 (5 ಎ), ಚಾಹಲ್ ಔಟಾಗದೆ 0 (0 ಎ)

1-11 (ದೇವದತ್ತ ಪಡಿಕ್ಕಲ್, 1.4), 2-33 (ರವಿಚಂದ್ರನ್ ಅಶ್ವಿನ್, 3.6), 3-33 (ಜೋಸ್ ಬಟ್ಲರ್‌, 4.1), 4-68 (ಸಂಜು ಸ್ಯಾಮ್ಸನ್‌, 9.3), 5-99 (ಡ್ಯಾರಿಲ್ ಮಿಚೆಲ್, 14.2), 6-102 (ಶಿಮ್ರೊನ್ ಹೆಟ್ಮೆಯರ್, 15.3‌), 7-110 (ಟ್ರೆಂಟ್ ಬೌಲ್ಟ್‌, 17.1), 8-121 (ಪ್ರಸಿದ್ಧ ಕೃಷ್ಣ, 18.4)

ಬೌಲಿಂಗ್: ಶಹಬಾಜ್ ಅಹಮ್ಮದ್ 3–0–35–0, ಮೊಹಮ್ಮದ್ ಸಿರಾಜ್ 4–0–30–2, ಜೋಶ್ ಹ್ಯಾಜಲ್‌ವುಡ್ 4–1–19–2, ವನಿಂದು ಹಸರಂಗ 4–0–23–2, ಹರ್ಷಲ್ ಪಟೇಲ್ 4–0–33–1, ಗ್ಲೆನ್ ಮ್ಯಾಕ್ಸ್‌ವೆಲ್‌‌ 1–0–4–0

ರಾಯಲ್ ಚಾಲೆಂಜರ್ಸ್‌ ಬೆಂಗಳೂರು 115 (19.3 ಓವರ್‌)

ವಿರಾಟ್‌ ಸಿ ಪರಾಗ್‌ ಬಿ ಪ್ರಸಿದ್ಧ 9 (10ಎ, 4X2), ಡುಪ್ಲೆಸಿ ಸಿ ಬಟ್ಲರ್‌ ಬಿ ಸೇನ್‌ 23 (21ಎ, 4X3, 6X1), ರಜತ್‌ ಬಿ ಅಶ್ವಿನ್‌ 16 (16ಎ, 6X1), ಮ್ಯಾಕ್ಸ್‌ವೆಲ್‌ ಸಿ ಪಡಿಕ್ಕಲ್ ಬಿ ಸೇನ್‌ 0 (1ಎ), ಶಹಬಾಜ್‌ ಸಿ ಪರಾಗ್ ಬಿ ಅಶ್ವಿನ್‌ 17 (27ಎ, 4X1),ಸುಯಶ್‌ ಸಿ ಪರಾಗ್ ಬಿ ಅಶ್ವಿನ್‌ 2 (7ಎ), ದಿನೇಶ್ ರನೌಟ್‌ (ಪ್ರಸಿದ್ಧ/ಚಾಹಲ್‌) 6 (4ಎ, 4X1), ಹಸರಂಗ ಸಿ ಮತ್ತು ಬಿ ಸೇನ್‌ 18 (13ಎ, 4X2), ಹರ್ಷಲ್‌ ಸಿ ಪರಾಗ್ ಬಿ ಸೇನ್ 8 (11ಎ, 6X1),ಸಿರಾಜ್‌ ಸಿ ಸೇನ್ ಬಿ ಪ್ರಸಿದ್ಧ 5 (5ಎ, 4X1), ಹ್ಯಾಜಲ್‌ವುಡ್‌ ಔಟಾಗದೆ 0 (2ಎ)

ವಿಕೆಟ್‌ ಪತನ:1-10 (ವಿರಾಟ್‌ ಕೊಹ್ಲಿ, 1.4), 2-37 (ಫಫ್‌ ಡುಪ್ಲೆಸಿ, 6.2), 3-37 (ಗ್ಲೆನ್ ಮ್ಯಾಕ್ಸ್‌ವೆಲ್‌, 6.3), 4-58 (ರಜತ್ ಪಾಟಿದಾರ್‌, 9.6), 5-66 (ಸುಯಶ್ ಪ್ರಭುದೇಸಾಯಿ, 11.4), 6-72 (ದಿನೇಶ್ ಕಾರ್ತಿಕ್‌, 12.4), 7–92 (ಶಹಬಾಜ್ ಅಹಮದ್‌, 15.4), 8–102 (ವನಿಂದು ಹಸರಂಗ, 16.4), 9–107 (ಮೊಹಮ್ಮದ್ ಸಿರಾಜ್‌, 17.4), 10–115 (ಹರ್ಷಲ್ ಪಟೇಲ್‌, 19.3)

ಬೌಲಿಂಗ್‌: ಟ್ರೆಂಟ್‌ ಬೌಲ್ಟ್‌ 3–0–20–0,ಪ್ರಸಿದ್ಧ ಕೃಷ್ಣ 4–0–23–2,ರವಿಚಂದ್ರನ್ ಅಶ್ವಿನ್‌ 4–0–17–3,ಕುಲದೀಪ್ ಸೇನ್‌ 3.3–0–20–4,ಡ್ಯಾರಿಲ್‌ ಮಿಚೆಲ್ 1–0–7–0,ಯಜುವೇಂದ್ರ ಚಾಹಲ್‌ 4–0–23–0

ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ 29 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.