ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಯಾವೆಲ್ಲ ತಂಡಗಳು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿವೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ.
ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹಿನ್ನಡೆ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪೃಥ್ವಿ ಶಾ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ.
ಈ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವಾಟ್ಸನ್ ಮಾಹಿತಿ ನೀಡಿದ್ದಾರೆ.
ಪೃಥ್ವಿ ಅನಾರೋಗ್ಯದ ಬಗ್ಗೆ ನಿಖರವಾಗಿ ತಿಳಿದಿಲ್ಲ. ಅವರು ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದು, ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆಗೆ ಲಭ್ಯರಾಗುವುದು ಅನುಮಾನ ಎಂದು ಹೇಳಿದ್ದಾರೆ.
ಮೇ 8ರಂದು ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಜ್ವರದಿಂದ ಬಳಲುತ್ತಿರುವ ಬಗ್ಗೆ ಪೃಥ್ವಿ ಮಾಹಿತಿ ನೀಡಿದ್ದರು.
ಪೃಥ್ವಿ ಶಾ, ಒಂಬತ್ತು ಪಂದ್ಯಗಳಲ್ಲಿ 28.78ರ ಸರಾಸರಿಯಲ್ಲಿ 259 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದು, 159.87ರ ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿದ್ದಾರೆ.
ರಿಷಭ್ ಪಂತ್ ಬಳಗವು 12 ಪಂದ್ಯಗಳಲ್ಲಿ ತಲಾ ಆರು ಗೆಲುವು ಹಾಗೂ ಸೋಲಿನೊಂದಿಗೆ ಒಟ್ಟು 12 ಅಂಕಗಳನ್ನು ಗಳಿಸಿದೆ. ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಡುವ ನಿಟ್ಟಿನಲ್ಲಿ ಡೆಲ್ಲಿ ಪಾಲಿಗೆ ಉಳಿದೆರಡು ಪಂದ್ಯ ನಿರ್ಣಾಯಕವೆನಿಸಿದೆ. ಮೇ 16ರಂದು ಪಂಜಾಬ್ ಕಿಂಗ್ಸ್ ಹಾಗೂ ಮೇ 21ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.