ನವಿ ಮುಂಬೈ:ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ ಆಕರ್ಷಕ ಅರ್ಧಶತಕದ (57) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟನ್ಸ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಸೋಮವಾರ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್, ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ (50*) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿತ್ತು.
ಬಳಿಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್, ವಿಲಿಯಮ್ಸನ್ ಕಲಾತ್ಮಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಐದು ಎಸೆತಗಳು ಬಾಕಿ ಉಳಿದಿರುವಂತೆಯೇ 19.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಇದರೊಂದಿಗೆ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಸನ್‌ರೈಸರ್ಸ್, ಬಳಿಕದ ಎರಡು ಪಂದ್ಯಗಳಲ್ಲಿ ಜಯದ ಹಾದಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಅತ್ತ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ್ದ ಗುಜರಾತ್, ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.
ಎಸ್ಆರ್‌ಎಚ್‌ಗೆ ಅಭಿಷೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 64 ರನ್ ಒಟ್ಟುಗೂಡಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ (42 ರನ್, 32 ಎಸೆತ, 6 ಬೌಂಡರಿ) ವಿಕೆಟ್ ನಷ್ಟವಾಯಿತು.
ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ವಿಲಿಯಮ್ಸನ್ 42 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಅರ್ಧಶಕದ (57 ರನ್, 46 ಎಸೆತ, 2 ಬೌಂಡರಿ, 4 ಸಿಕ್ಸರ್) ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.
ಕೊನೆಯ ಹಂತದಲ್ಲಿ ನಿಕೋಲಸ್ ಪೂರನ್ (34*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸನ್‌ರೈಸರ್ಸ್‌ಗೆ ಅರ್ಹ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ಪಾಂಡ್ಯ ಹೋರಾಟ ವ್ಯರ್ಥ...
ಗುಜರಾತ್‌ಗೆ ಶುಭಮನ್ ಗಿಲ್ (7) ವಿಕೆಟ್ ಬೇಗನೇ ನಷ್ಟವಾಯಿತು. ಸಾಯಿ ಸುದರ್ಶನ್ (11), ಮ್ಯಾಥ್ಯೂ ವೇಡ್ (19) ಹಾಗೂ ಡೇವಿಡ್ ಮಿಲ್ಲರ್ (12) ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ.
ಇನ್ನೊಂದೆಡೆ ನಾಯಕನ ಆಟವಾಡಿದ ಪಾಂಡ್ಯ ತಂಡಕ್ಕೆ ಆಸರೆಯಾದರು. ಅವರಿಗೆ ಅಭಿನವ್ ಮನೋಹರ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಅಲ್ಲದೆ ಐದನೇ ವಿಕೆಟ್‌ಗೆ 50 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.
21 ಎಸೆತಗಳನ್ನು ಎದುರಿಸಿದ ಅಭಿನವ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದರು.
ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಪಾಂಡ್ಯ 50 ರನ್ (42 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಹಾಗೂ ಟಿ. ನಟರಾಜನ್ ತಲಾ ಎರಡು ವಿಕೆಟ್ ಕಬಳಿಸಿದರು.
ಹೈದರಾಬಾದ್ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯುತ್ತಿದೆ. ಇನ್ನೊಂದೆಡೆ ಸತತ ಎರಡು ಸೋಲುಗಳ ಬಳಿಕ ಚೆನ್ನೈ ವಿರುದ್ಧ ಗೆಲುವು ದಾಖಲಿಸಿರುವ ಹೈದರಾಬಾದ್ ಉತ್ತಮ ಲಯವನ್ನು ಮುಂದುವರಿಸುವ ಛಲದಲ್ಲಿದೆ.
ಪ್ಲೇಯಿಂಗ್ ಇಲೆವೆನ್:
ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪಂಜಾಬ್ ಎದುರಿನ ಪಂದ್ಯದಲ್ಲಿ ಅವರು ವೃತ್ತಿಜೀವನದ ಗರಿಷ್ಠ ಮೊತ್ತ ಗಳಿಸಿದ್ದರು. ಲಾಕಿ ಫರ್ಗ್ಯುಸನ್ ಮತ್ತು ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಹೈದರಾಬಾದ್‌ಗೆ ಸವಾಲಾಗಬಹುದು.
ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅಭಿಷೇಕ್ ಶರ್ಮಾ ಕೂಡ ಮಿಂಚುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.