ADVERTISEMENT

ಧೋನಿಗೆ ಉಮ್ರಾನ್ ಯಾರ್ಕರ್ - ಐಪಿಎಲ್‌ 2022ರ ಅತಿ ವೇಗದ ಎಸೆತ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 14:11 IST
Last Updated 2 ಮೇ 2022, 14:11 IST
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್   

ಪುಣೆ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್, ಗಂಟೆಗೆ 154 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಇದು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಇದುವರೆಗೆ ದಾಖಲಾಗಿರುವ ಅತಿ ವೇಗದ ಎಸೆತವಾಗಿದೆ.

ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಸಲ ಗಂಟೆಗೆ 154 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವಲ್ಲಿ ಉಮ್ರಾನ್ ಯಶಸ್ವಿಯಾಗಿದ್ದಾರೆ. ಮೊದಲು ಉಮ್ರಾನ್ ಮಲಿಕ್ ಅವರ ಗಂಟೆಗೆ 154 ಕಿ.ಮೀ. ವೇಗದ ಎಸೆತವನ್ನು ಋತುರಾಜ್ ಗಾಯಕವಾಡ್ ಬೌಂಡರಿಗೆ ಅಟ್ಟಿದ್ದರು.

ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗಂಟೆಗೆ 154 ಕಿ.ಮೀ. ವೇಗದಲ್ಲಿ ಯಾರ್ಕರ್ ಎಸೆಯುವ ಮೂಲಕ ಪ್ರಭಾವಿ ಎನಿಸಿದರು. ಆದರೆ ಉಮ್ರಾನ್ ದಾಳಿಯನ್ನು ತಕ್ಷಣ ಗ್ರಹಿಸಿದ ಧೋನಿ ರಕ್ಷಣಾತ್ಮಕ ಆಟವಾಡುವ ಮೂಲಕ ಒಂದು ರನ್ ಗಳಿಸಿದರು.

ನಾಲ್ಕು ಓವರ್‌ನಲ್ಲಿ 48 ರನ್ ಬಿಟ್ಟುಕೊಟ್ಟಿದ್ದ ಉಮ್ರಾನ್ ದುಬಾರಿಯೆನಿಸಿದ್ದರು. ಅಲ್ಲದೆ ವಿಕೆಟ್ ಗಳಿಸುವಲ್ಲಿ ವಿಫಲರಾಗಿದ್ದರು.

ಪಂದ್ಯದ ಬಳಿಕ ಉಮ್ರಾನ್ ಮಲಿಕ್ ಅವರಿಗೆ ಮಹೇಂದ್ರ ಸಿಂಗ್ ಧೋನಿ ಅಮೂಲ್ಯ ಸಲಹೆಗಳನ್ನು ನೀಡಿದರು.

ಜಮ್ಮು ಕಾಶ್ಮೀರದ 22 ವರ್ಷದ ವೇಗಿ ಉಮ್ರಾನ್ ಮಲಿಕ್, ಈಗಾಗಲೇ ಐಪಿಎಲ್‌ನಲ್ಲಿ ಛಾಪು ಒತ್ತಿದ್ದು, ತಾವು ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿ ಅತಿ ವೇಗದ ಎಸೆತಕ್ಕಾಗಿ ತಲಾ ಒಂದು ಲಕ್ಷದಂತೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದರು. ಇದು ಐಪಿಎಲ್‌ನಲ್ಲಿ ಉಮ್ರಾನ್ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

ಐಪಿಎಲ್ 2022ರಲ್ಲಿ ವಿಕೆಟ್ ಬೇಟೆಯಲ್ಲಿ ಉಮ್ರಾನ್ ಐದನೇ ಸ್ಥಾನದಲ್ಲಿದ್ದು, ಇದುವರೆಗೆ ಒಂಬತ್ತು ಪಂದ್ಯಗಳಲ್ಲಿ 15 ವಿಕೆಟ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.