ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೋಲಿನ ಕಹಿ ಅನುಭವಿಸಿದೆ.
ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ. ಈ ನಡುವೆ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿರುವ ವಿರಾಟ್ ಐದನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಪಂಜಾಬ್ ವಿರುದ್ಧ ಅಜೇಯ 41 ರನ್ ಗಳಿಸಿರುವ ವಿರಾಟ್, ಚುಟುಕು ಕ್ರಿಕೆಟ್‌ನಲ್ಲಿ 310 ಇನ್ನಿಂಗ್ಸ್‌ಗಳಲ್ಲಿ ಒಟ್ಟು 10,314 ರನ್ ಗಳಿಸಿದ್ದಾರೆ. ಆರನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 10,308 ರನ್ ಹೊಂದಿದ್ದಾರೆ.
ಇದೇ ಪಟ್ಟಿಯಲ್ಲಿ ಆಸ್ಟ್ರೇಲಿಯಾದವರೇ ಆದ ಆ್ಯರನ್ ಫಿಂಚ್ (10,444) ಹಿಂದಿಕ್ಕಲು ಕೊಹ್ಲಿಗೆ ಇನ್ನು 130 ರನ್‌ಗಳ ಅವಶ್ಯಕತೆಯಿದೆ.
ಈ ಪಟ್ಟಿಯಲ್ಲಿವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (14562) ಮುಂಚೂಣಿಯಲ್ಲಿದ್ದು, ಪಾಕಿಸ್ತಾನದ ಶೋಯಬ್ ಮಲಿಕ್ (11,698) ಹಾಗೂ ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ (11430) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ಅಂದ ಹಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 6,324 ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.