ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್ ಮೇಲಿನ ತಮ್ಮ ನಿಷ್ಠೆಯನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
'ಐಪಿಎಲ್ ಪ್ರಾರಂಭದ ಮೊದಲ ಮೂರು ವರ್ಷಗಳಲ್ಲಿ ಅವಕಾಶಗಳ ವಿಷಯದಲ್ಲಿ ಈ ಫ್ರಾಂಚೈಸ್ ತನಗೆ ಏನು ನೀಡಿದೆ ಎಂಬುದು ತನ್ನ ಪಾಲಿಗೆ ಅತ್ಯಂತ ವಿಶೇಷವೆನಿಸುತ್ತದೆ. ಏಕೆಂದರೆ ಅನೇಕ ತಂಡಗಳಿಗೆ ನನ್ನನ್ನು ಖರೀದಿಸುವ ಅವಕಾಶವಿತ್ತು. ಆದರೆ ಯಾರೂ ನನ್ನನ್ನು ಬೆಂಬಲಿಸಲಿಲ್ಲ. ಯಾರಿಗೂ ನಂಬಿಕೆಯಿರಲಿಲ್ಲ' ಎಂದು ಹೇಳಿದ್ದಾರೆ.
ತಮ್ಮ ಜೀವನದಲ್ಲಿ ಐಪಿಎಲ್ ಬೀರಿರುವ ಪ್ರಭಾವದ ಕುರಿತು 'ಸ್ಟಾರ್ ಸ್ಪೋರ್ಟ್ಸ್'ನ 'ಇನ್‌ಸೈಡ್ ಆರ್‌ಸಿಬಿ' ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಭಾರತಕ್ಕಾಗಿ ಆಡುವುದರ ಹೊರತಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ವಿಶ್ವದ ಅತ್ಯುತ್ತಮ ಆಟಗಾರನಾಗಿ ಸ್ಪರ್ಧಿಸಲು ಹಾಗೂ ಜ್ಞಾನವನ್ನು ಹಂಚಿಕೊಳ್ಳಲು ಐಪಿಎಲ್ ಅತ್ಯುತ್ತಮ ಅವಕಾಶವನ್ನು ಒದಗಿಸಿದೆ ಎಂದು ಪ್ರತಿಪಾದಿಸಿದ್ದಾರೆ.
'ಇದರಿಂದ ಪ್ರಗತಿ ಸಾಧಿಸಲು ಸಹಾಯ ಮಾಡಿತು. ವಿಭಿನ್ನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಮತ್ತು ಆಟಗಾರರು ಯಾವ ಮನೋಸ್ಥಿತಿಯನ್ನು ಹೊಂದಿದ್ದಾರೆ ಎಂಬ ವಿಷಯಗಳನ್ನು ಗ್ರಹಿಸಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.
'ನಿಮಗೆ ತಿಳಿದಿರುವಂತೆಯೇ, ಆಟಗಾರರು ಯಶಸ್ಸಿಗಾಗಿ ವಿಭಿನ್ನ ಮಾರ್ಗಗಳನ್ನು ಹೊಂದಿರುತ್ತಾರೆ. ಹಾಗಾಗಿ ಇದು ಕೇವಲ ಒಂದು ಮಾದರಿಯಲ್ಲ. ಆಟಗಾರರ ಬುದ್ಧಿಶಕ್ತಿ ಗ್ರಹಿಸಲು ಅವಕಾಶ ಲಭಿಸಿದ್ದಾಗಿ ಕೃತಜ್ಞನಾಗಿದ್ದೇನೆ. ಪ್ರತಿ ದಿನ ಹೊಸ ವಿಚಾರ ಕಲಿಯಲು ನೆರವಾಗಿದೆ. ಇದು ನನ್ನ ಪಾಲಿಗೆ ಅತ್ಯಂತ ವೈಶಿಷ್ಟ್ಯವೆನಿಸಿದೆ' ಎಂದು ಹೇಳಿದ್ದಾರೆ.
ಆರ್‌ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಹಾಗಿದ್ದರೂ ಫ್ರಾಂಚೈಸ್ ಪರ ತೋರಿರುವ ನಿಷ್ಠೆಯ ಬಗ್ಗೆ ಮಾತನಾಡಿರುವ ಕೊಹ್ಲಿ, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಜೀವನ ಪಯಣದಲ್ಲಿ ಮಹಾನ್ ಆಟಗಾರರು ಎಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ ಎಂದು ಸಂಬೋಧಿಸುವುದಿಲ್ಲ. ನೀವು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರೆ ಜನರು ನಿಮ್ಮನ್ನು ಇಷ್ಟಪಡುತ್ತಾರೆ. ಕೆಟ್ಟವರಾದರೆ ನಿಮ್ಮಿಂದ ದೂರವಿರುತ್ತಾರೆ. ಅಂತಿಮವಾಗಿ ಅದುವೇಜೀವನ' ಎಂದು ಹೇಳಿದ್ದಾರೆ.
ಹಾಗಾಗಿ ಐಪಿಎಲ್ ಟ್ರೋಫಿ ಗೆದ್ದಿಲ್ಲ ಎಂಬ ಜನರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಹಾಗೂ ಅನುಷ್ಕಾ ಹೊರತಾಗಿ ಮೂರನೇ ವ್ಯಕ್ತಿಯ ವಿಚಾರಗಳ ಬಗ್ಗೆ ಚಿಂತಿತನಾಗಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.