ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಕಳಪೆ ಬೌಲಿಂಗ್ ನಡೆಸುವ ಮೂಲಕ ಟೀಕೆಗೆ ಗುರಿಯಾಗಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧ 206 ರನ್‌ಗಳ ಬೃಹತ್ ಮೊತ್ತ ಪೇರಿಸಿಯೂ ಆರ್‌ಸಿಬಿ ಸೋಲಿಗೆ ಶರಣಾಗಿತ್ತು. ಆದರೆ ತಪ್ಪನ್ನು ತಿದ್ದಿಕೊಂಡಿರುವ ಆರ್‌ಸಿಬಿ ಪಡೆ, ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶಿಸ್ತಿನ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದೆ.
ವನಿಂದು ಹಸರಂಗ ನಾಲ್ಕು, ಆಕಾಶ್ ದೀಪ್ ಮೂರು, ಹರ್ಷಲ್ ಪಟೇಲ್ ಎರಡು ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಿತ್ತು ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದರು.
ಪರಿಣಾಮ ಕೋಲ್ಕತ್ತ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೇವಲ 20 ರನ್ ತೆತ್ತ ಹಸರಂಗ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಆಕಾಶ್ ದೀಪ್ 45 ರನ್ ನೀಡಿ ದುಬಾರಿಯೆನಿಸಿದರೂ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಹರ್ಷಲ್ ಪಟೇಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 11 ರನ್ ಮಾತ್ರ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು. ಇದರಲ್ಲಿ ಎರಡು ಮೇಡನ್ ಓವರ್ ಒಳಗೊಂಡಿತ್ತಲ್ಲದೆ ಅಪಾಯಕಾರಿ ಆ್ಯಂಡ್ರೆ ರಸೆಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕಳೆದ ಪಂದ್ಯದಲ್ಲಿ 59 ರನ್ ನೀಡಿದ್ದ ಸಿರಾಜ್ ಕೂಡ 25 ರನ್ನಿಗೆ ಒಂದು ವಿಕೆಟ್ ಪಡೆದು ಪ್ರಭಾವಿ ಎನಿಸಿಕೊಂಡರು.
ಪಂಜಾಬ್ ವಿರುದ್ಧ 22 ಎಕ್ಸ್‌ಟ್ರಾ ರನ್ ನೀಡಿದ್ದ ಆರ್‌ಸಿಬಿ, ಕೆಕೆಆರ್ ವಿರುದ್ಧ 6 ರನ್ ಮಾತ್ರ ನೀಡಿ ಶಿಸ್ತಿನ ಬೌಲಿಂಗ್ ಸಂಘಟಿಸುವಲ್ಲಿ ಯಶಸ್ವಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.