ದುಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರೆಲ್ಲರೂ ಮುಂದಿನ ವರ್ಷವೂ ಮತ್ತೆ ಒಂದೇ ತಂಡವಾಗಿ ಆಡಬೇಕಾದರೆ ಪವಾಡ ಸಂಭವಿಸಬೇಕಾಗುತ್ತದೆ ಎಂದು ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಐಪಿಎಲ್ ಪಯಣದ ಕುರಿತು ರೋಹಿತ್ ಶರ್ಮಾ ಮೆಲುಕು ಹಾಕಿದ್ದಾರೆ. ಮುಂದಿನ ವರ್ಷ ಮೆಗಾ ಹರಾಜು ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆರೋಹಿತ್ ನೀಡಿರುವ ಹೇಳಿಕೆಯು ಕುತೂಹಲವೆನಿಸಿದೆ.
ಏನಾದರೂ ಪವಾಡ ಸಂಭವಿಸದ ಹೊರತಾಗಿ ನಾವು ಮತ್ತೆ ಒಂದೇ ತಂಡವನ್ನು ಹೊಂದಲು ಸಾಧ್ಯವಿಲ್ಲ. ಮುಂದಿನ ವರ್ಷದಲ್ಲಿ ಅವರೆಲ್ಲರೂ ಒಂದೇ ಗುಂಪಿನ ಭಾಗವಾಗುವುದು ಕಷ್ಟಕರ. ಆದರೆ ಅದೇ ಗುಂಪಿನ ಆಟಗಾರರನ್ನು ಪಡೆದು ಮುಂದಿನ ಕೆಲವು ವರ್ಷಗಳಲ್ಲೂ ಮೋಡಿ ಮಾಡುವ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಕಳೆದ 11 ವರ್ಷಗಳಲ್ಲಿ ಮುಂಬೈ ಫ್ರಾಂಚೈಸಿ ಪರ ಆಡುವ ಮೂಲಕ ಅನೇಕ ಸ್ಮರಣೀಯ ನೆನಪುಗಳನ್ನು ಹೊಂದಿದ್ದೇವೆ. ಅನೇಕ ಸಲ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿದ್ದೇವೆ. ಇವೆಲ್ಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ದುರದೃಷ್ಟವಶಾತ್ ಈ ಬಾರಿ ಉತ್ತಮವಾಗಿ ಆಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಬೇಸರವಿದೆ. ಆದರೆ ಇದರಿಂದ ಹಿಂದಿನ ಸಾಧನೆಗಳಿಗೆಧಕ್ಕೆ ಸಂಭವಿಸುವುದಿಲ್ಲ. ಅಲ್ಲದೆ ತಂಡದ ಗುಣಮಟ್ಟದ ಆಟದಲ್ಲಿ ಬದಲಾವಣೆಯಾಗುವುದಿಲ್ಲ. ಹಾಗಾಗಿ ಈ ಬಗ್ಗೆ ಚಿಂತಿತನಾಗಿಲ್ಲ ಎಂದರು.
ತಂಡದೆಲ್ಲ ಆಟಗಾರರಿಗೆ ಶ್ರೇಯ ಸಲ್ಲಬೇಕು. ಅವರೆಲ್ಲರೂ ತಂಡಕ್ಕಾಗಿ ಪರಿಶ್ರಮಿಸಿದ್ದಾರೆ. ಉತ್ತಮ ತಂಡ ಕಟ್ಟಲು ಕೋಚಿಂಗ್ ಪ್ಯಾನೆಲ್, ಸಹಾಯಕ ಸಿಬ್ಬಂದಿಗಳು ನೆರವಾಗಿದ್ದಾರೆ. ಈ ಫ್ರಾಂಚೈಸಿಯು ತನ್ನೆಲ್ಲ ಆಟಗಾರರನ್ನು ಒಂದು ಕುಟಂಬದಂತೆ ನೋಡಿಕೊಂಡಿದೆ ಎಂದು ಹೇಳಿದರು.
2013ರಲ್ಲಿ ನಾಯಕನಾದ ಬಳಿಕ ಪಂದ್ಯದ ಮೇಲಿನ ನನ್ನ ಸಂಪೂರ್ಣ ನೋಟವು ಬದಲಾಗಿದೆ. ಓರ್ವ ಆಟಗಾರ ಹಾಗೂ ನಾಯಕನಾಗಿ ಬೆಳೆಯಲು ಸಾಧ್ಯವಾಯಿತು. ಹಾಗಾಗಿ ಯಾವತ್ತೂ ನಾನು ಈ ಫ್ರಾಂಚೈಸಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಐಪಿಎಲ್ 2021ರಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಾಲಿ ಚಾಂಪಿಯನ್ ಮುಂಬೈ ಪ್ಲೇ-ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.