ಬೆಂಗಳೂರು: ಕೆಲಸದೊತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವ ಜವಾಬ್ದಾರಿಯನ್ನು ತೊರೆಯಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ.
ಹಾಗಾಗಿ ಮುಂದಿನ ವರ್ಷದಿಂದ ಆರ್‌ಸಿಬಿ ತಂಡದ ನಾಯಕ ಯಾರು ಆಗಲಿದ್ದಾರೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ. ಮುಂದಿನ ವರ್ಷ ಐಪಿಎಲ್‌ಗೂ ಮುನ್ನ 'ಮೆಗಾ ಹರಾಜು' ನಡೆಯಲಿದೆ. ಹಾಗಾಗಿ ಆರ್‌ಸಿಬಿ ನಾಯಕ ಯಾರು ಆಗಲಿದ್ದಾರೆ ಎಂಬುದನ್ನು ಅಂದಾಜಿಸುವುದು ಕಷ್ಟಕರವಾಗಿದೆ.
ಮುಂದಿನ ವರ್ಷದಿಂದ ಐಪಿಎಲ್‌ಗೆ ಇನ್ನೆರಡು ತಂಡಗಳು ಸೇರ್ಪಡೆಯಾಗಲಿದೆ. ಇದರೊಂದಿಗೆ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. ಹಾಗಾಗಿ ಫ್ರಾಂಚೈಸಿಗಳಿಗೆ ಪ್ರಮುಖ ಆಟಗಾರರನ್ನು ತಮ್ಮ ಬಳಿ ಉಳಿಸುವ ಹಕ್ಕು ಇರುತ್ತದೆಯೇ ಎಂಬುದು ಕೂಡ ತಿಳಿದು ಬಂದಿಲ್ಲ.
ಈ ಎಲ್ಲದರ ನಡುವೆ ಐಪಿಎಲ್ 2022ರಿಂದ ಆರ್‌ಸಿಬಿ ನಾಯಕತ್ವವನ್ನು ವಹಿಸಬಲ್ಲ ಕೆಲವು ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಇಲ್ಲಿ ಕೊಡಲಾಗಿದೆ.
ಎಬಿ ಡಿ ವಿಲಿಯರ್ಸ್
ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಆರ್‌ಸಿಬಿ ನಾಯಕ ಸ್ಥಾನಕ್ಕೆ ಸೂಕ್ತ ಹೆಸರು ಎಬಿ ಡಿ ವಿಲಿಯರ್ಸ್ ಅವರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ಜೊತೆಗಿನ ಒಡನಾಟವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ನಾಯಕ ಸ್ಥಾನ ಎಬಿ ಡಿ ವಿಲಿಯರ್ಸ್ ವಹಿಸಿಕೊಳ್ಳುವ ಸಾಧ್ಯತೆ ವಿರಳವಾಗಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.
ಗ್ಲೆನ್ ಮ್ಯಾಕ್ಸ್‌ವೆಲ್
ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ಸ್, ಸದ್ಯ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ 2021ನೇ ಸಾಲಿನ ಮೊದಲಾರ್ಧದಲ್ಲಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಮರ್ಥರೇ ಎಂಬುದು ಪ್ರಶ್ನೆಯಾಗಿದೆ.
ಯಜುವೇಂದ್ರ ಚಾಹಲ್
ಕೊಹ್ಲಿರೀತಿಯಲ್ಲೇ ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳನ್ನು ಕಳೆದಿರುವ ಚಾಹಲ್, ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಇದುವರೆಗೆ ನಾಯಕತ್ವ ವಹಿಸಿರುವ ಅನುಭವ ಇಲ್ಲದಿರುವುದು ಅಲ್ಪ ಹಿನ್ನಡೆಯಾಗಿದೆ.
ದೇವದತ್ ಪಡಿಕ್ಕಲ್
ತಂಡದ ದೀರ್ಘ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರನಿಗೆ ನಾಯಕ ಸ್ಥಾನ ನೀಡಿದರೆ ಅಚ್ಚರಿಯೇನಿಲ್ಲ. ಈ ಪಟ್ಟಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲಿದ್ದಾರೆ.
ಆರ್. ಅಶ್ವಿನ್
ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಿರುವ ರವಿಚಂದ್ರನ್ ಅಶ್ವಿನ್, ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಮುಂದಿನ ವರ್ಷ ಮೆಗಾ ಹರಾಜು ನಡೆಯಲಿರುವುದರಿಂದ ಆರ್‌ಸಿಬಿ ತನ್ನ ತೆಕ್ಕೆಗೆ ಸೇರಿಸಿದರೆ ನಾಯಕನಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಡೇವಿಡ್ ವಾರ್ನರ್ ಮುಂದಿನ ವರ್ಷ ಯಾವ ಫ್ರಾಂಚೈಸಿಯನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಕುತೂಹಲವೆನಿಸಿದೆ. ಹಾಗೊಂದು ವೇಳೆ ಆರ್‌ಸಿಬಿ ತಂಡವನ್ನು ಸೇರಿದರೆ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿ ಗುರುತಿಸಲಿದ್ದಾರೆ.
ಶ್ರೇಯಸ್ ಅಯ್ಯರ್
ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಶ್ರೇಯಸ್ ಅಯ್ಯರ್ ಗಾಯದಿಂದಾಗಿ ನಾಯಕತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈಗ ಗಾಯಮುಕ್ತರಾದರೂ ಪ್ರಸಕ್ತ ಸಾಲಿನಲ್ಲಿ ರಿಷಭ್ ಪಂತ್ ಅವರನ್ನೇ ನಾಯಕರಾಗಿ ಮುಂದುವರಿಸಲು ಡೆಲ್ಲಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಯ್ಯರ್ ಮುಂದಿನ ವರ್ಷ ಫ್ರಾಂಚೈಸಿ ಬಿಟ್ಟು ಬಂದರೆ ಅವರ ಮೇಲೆ ಆರ್‌ಸಿಬಿ ಕಣ್ಣಾಯಿಸಬಹುದಾಗಿದೆ.
ಸೂರ್ಯಕುಮಾರ್ ಯಾದವ್
ಭರವಸೆಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ತಂಡ ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಾಗಿದೆ. ಆದರೂ ಮೆಗಾ ಹರಾಜಿನಲ್ಲಿ ಸೂರ್ಯಕುಮಾರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾದರೆ ನಾಯಕ ಸ್ಥಾನಕ್ಕೆ ಪರಿಗಣಿಸಬಹುದಾಗಿದೆ.
ಜೋಸ್ ಬಟ್ಲರ್
ವಿದೇಶಿ ಆಟಗಾರರ ಪೈಕಿ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್, ಮುಂದಿನ ವರ್ಷ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಕುತೂಹಲವೆನಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೇಲೆ ಗಮನ ಕೇಂದ್ರಿಕರಿಸುವುದಾದರೆ ಬಟ್ಲರ್ ಉತ್ತಮ ಆಯ್ಕೆಯಾಗಬಲ್ಲರು.
ಇನ್ನು ಈ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್, ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್, ಪೃಥ್ವಿ ಶಾ, ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಬೆನ್ ಸ್ಟೋಕ್ಸ್ ಮುಂತಾದ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಇವೆಲ್ಲಕ್ಕೂ ಐಪಿಎಲ್ ಮೆಗಾ ಹರಾಜಿನ ಬಳಿಕವಷ್ಟೇ ಸ್ಪಷ್ಪ ಚಿತ್ರಣ ದೊರಕಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.