ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ವರ್ಷ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡುತ್ತಾರೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಕುರಿತು ಮುಂಬೈ ತಂಡದ ಕೋಚ್ ಮಹೇಲಾ ಜಯವರ್ಧನೆ ಪ್ರತಿಕ್ರಿಯೆಯನ್ನು 'ಇಂಡಿಯಾ ಟುಡೇ' ವರದಿ ಮಾಡಿದೆ.
'ತಂಡದಲ್ಲಿರುವ ಪ್ರತಿಯೊಬ್ಬರನ್ನು ಆಯ್ಕೆಗೆ ಪರಿಗಣಿಸುತ್ತೇವೆ. ನಾವು ಪಂದ್ಯಗಳನ್ನು ಹೇಗೆ ಗೆಲ್ಲಬಹುದು ಮತ್ತು ಸರಿಯಾದ ಸಂಯೋಜನೆ ಹೊಂದಿದ ತಂಡವನ್ನು ಖಚಿಪಡಿಸಿಕೊಳ್ಳುವುದಕ್ಕೆ ನಮ್ಮ ಆದ್ಯತೆಯಾಗಿದೆ. ಹಾಗಾಗಿ ಈ ಎಲ್ಲ ಅಂಶಗಳು ಹೇಗೆ ಸಾಗುತ್ತವೆ ಎಂಬುದನ್ನು ನೋಡೋಣ' ಎಂದು ಹೇಳಿದ್ದಾರೆ.
'ಪ್ರತಿಯೊಂದು ಪಂದ್ಯದಲ್ಲಿ ಆತ್ಮವಿಶ್ವಾಸ ಅಡಗಿದೆ. ನಾವು ಮೊದಲ ಗೆಲುವು ದಾಖಲಿಸಿದ್ದು, ಮತ್ತಷ್ಟು ಗೆಲುವುಗಳನ್ನು ಸಾಧಿಸಿ ಆತ್ಮವಿಶ್ವಾಸ ಮರಳಿ ಪಡೆಯಬೇಕಿದೆ. ಇದಕ್ಕಾಗಿ ಉತ್ತಮ ತಂಡವನ್ನು ಕಣಕ್ಕಿಳಿಸಬೇಕಿದೆ. ಅರ್ಜುನ್ ಅವರಲ್ಲಿ ಒಬ್ಬರಾಗಿದ್ದಾರೆ, ಖಂಡಿತವಾಗಿಯೂ ಪರಿಗಣಿಸುತ್ತೇವೆ. ಹೌದು, ಇವೆಲ್ಲವೂ ತಂಡದ ಸಂಯೋಜನೆಯನ್ನು ಅವಲಂಬಿಸಿರುತ್ತದೆ' ಎಂದು ಹೇಳಿದ್ದಾರೆ.
ಸತತ ಎಂಟು ಸೋಲಿನ ಮುಖಭಂಗಕ್ಕೊಳಗಾಗಿದ್ದ ಮುಂಬೈ, ಒಂಬತ್ತನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದುಕೊಂಡಿತ್ತು. ಈಗ ಉಳಿದಿರುವ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ.
ಐಪಿಎಲ್ 2022 ಮೆಗಾ ಹರಾಜಿನಲ್ಲಿ ₹30 ಲಕ್ಷ ನೀಡಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಈ ಎಡಗೈ ವೇಗಿ ತಮ್ಮ ಚೊಚ್ಚಲ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.