ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಣ್ಣ, ತಮ್ಮಂದಿರಾದ ಕೃಣಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಳಗಗಳು ಭಾನುವಾರ ಮುಖಾಮುಖಿಯಾಗಲಿವೆ.
ಹಾರ್ದಿಕ್ ನಾಯಕತ್ವದ ಗುಜರಾತ್ ಸೂಪರ್ ಜೈಂಟ್ಸ್ ಮತ್ತು ಕೆ.ಎಲ್. ರಾಹುಲ್ ಗಾಯಗೊಂಡು ಹೊರಗುಳಿದ ಕಾರಣ ಕೃಣಾಲ್ ನಾಯಕರಾಗಿರುವ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಹಣಾಹಣಿ ನಡೆಸಲಿವೆ.
ಉಭಯ ತಂಡಗಳೂ ಹೋದ ವರ್ಷದಿಂದ ಐಪಿಎಲ್ ಟೂರ್ನಿಯಲ್ಲಿ ಸೇರ್ಪಡೆಯಾಗಿವೆ. ಆಗಿನಿಂದಲೂ ಹಾರ್ದಿಕ್ ನಾಯಕತ್ವ ವಹಿಸಿದ್ದರು. ಚಾಂಪಿಯನ್ ಕೂಡ ಆಗಿತ್ತು. ಈ ಬಾರಿಯೂ ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದೆ. ಲಖನೌ ತಂಡವು ಎರಡನೇ ಸ್ಥಾನದಲ್ಲಿದೆ.
ಲಖನೌ ತಂಡಕ್ಕೆ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ಅವರು ಕೂಡ ಅಲಭ್ಯರಾಗಿದ್ದಾರೆ. ತಂಡವು ಆಡಿದ್ದ ಕಳೆದ ಪಂದ್ಯವು ಮಳೆಗೆ ರದ್ದಾಗಿತ್ತು. ಕೇವಲ ಒಂದು ಪಾಯಿಂಟ್ ಸಿಕ್ಕಿತ್ತು. ತಂಡವು ಆಲ್‌ರೌಂಡರ್ ಮಾರ್ಕಸ್ ಸ್ಟೊಯನಿಸ್, ದೀಪಕ್ ಹೂಡಾ, ಬ್ಯಾಟರ್ ಆಯುಷ್ ಬಡೋಣಿ, ಕೈಲ್ ಮೇಯರ್ಸ್, ವಿಕೆಟ್‌ಕೀಪರ್ ನಿಕೊಲಸ್ ಪೂರನ್, ಸ್ಪಿನ್ನರ್ ರವಿ ಬಿಷ್ಣೋಯಿ, ಅಮಿತ್ ಮಿಶ್ರಾ ಅವರ ಆಟದ ಮೇಲೆ ಹೆಚ್ಚು ಭರವಸೆ ಇಟ್ಟಿದೆ.
ಆದರೆ ಗುಜರಾತ್ ತಂಡವು ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುತ್ತಿದೆ. ಆರಂಭಿಕ ಜೋಡಿ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಉತ್ತಮ ಅಡಿಪಾಯ ಹಾಕುತ್ತಿದ್ದಾರೆ. ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್ ಹಾಗೂ ಹಾರ್ದಿಕ್ ಅವರು ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುತ್ತಿದ್ದಾರೆ.
ಸ್ಪಿನ್ ಜೋಡಿ ರಶೀದ್ ಖಾನ್ ಹಾಗೂ ನೂರ್ ಅಹಮದ್ ಅವರ ಮೋಡಿಯಿಂದಾಗಿ ಗುಜರಾತ್ ತಂಡವು ರಾಜಸ್ಥಾನ ರಾಯಲ್ಸ್ ಎದುರು ಜಯಿಸಿತ್ತು. ಒಟ್ಟು 14 ಅಂಕ ಗಳಿಸಿರುವ ಹಾರ್ದಿಕ್ ಬಳಗವು ತನ್ನ ಪಾಲಿಗೆ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದರೂ ಪ್ಲೇ ಆಫ್ ಪ್ರವೇಶಿಸುವ ಹಾದಿ ಸುಗಮವಾಗಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನಿಮಾ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.