ADVERTISEMENT

ಐಪಿಎಲ್‌ ಫೈನಲ್‌ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ ಚೆನ್ನೈ ತಂಡದ ಸ್ಟಾರ್ ಆಟಗಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2023, 13:59 IST
Last Updated 28 ಮೇ 2023, 13:59 IST
ಚೆನ್ನೈ ಸೂಪರ್‌ ಕಿಂಗ್ಸ್–ಪಿಟಿಐ ಚಿತ್ರ
ಚೆನ್ನೈ ಸೂಪರ್‌ ಕಿಂಗ್ಸ್–ಪಿಟಿಐ ಚಿತ್ರ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್‌ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್​ನಲ್ಲಿ 204 ಪಂದ್ಯಗಳನ್ನಾಡಿರುವ ರಾಯುಡು 4,329 ರನ್ ಗಳಿಸಿದ್ದಾರೆ. ಈವರಗೆ 1 ಶತಕ ಹಾಗೂ 22 ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

2018 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ರಾಯುಡು ಕಳೆದ ಆವೃತ್ತಿಯಲ್ಲಿ ಐಪಿಎಲ್​ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಆದರೆ, ಸಿಎಸ್​ಕೆ ಫ್ರಾಂಚೈಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಈ ಬಾರಿ ಕೂಡ ರಾಯುಡು ಸಿಎಸ್​ಕೆ ಪರ ಕಣಕ್ಕಿಳಿದಿದ್ದರು.

ADVERTISEMENT

ಇದೀಗ ಸಿಎಸ್​ಕೆ ತಂಡವು ಫೈನಲ್ ಪ್ರವೇಶಿಸಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಆಡುವ ಪಂದ್ಯವು ನನ್ನ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ. ಅಲ್ಲದೆ ಈ ನಿವೃತ್ತಿ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ರಾಯುಡು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದರ ನಡುವೆ ಮುಂಬೈ ಇಂಡಿಯನ್ಸ್ ಪರ 3 ಹಾಗೂ ಸಿಎಸ್​ಕೆ ಪರ 2 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಈ ಬಾರಿ ಫೈನಲ್ ಪ್ರವೇಶಿಸಿದ ಸಿಎಸ್​ಕೆ ತಂಡದ ಭಾಗವಾಗಿರುವ ರಾಯುಡು 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 139 ರನ್​ ಕಲೆಹಾಕಿದ್ದಾರೆ.

ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ತಂಡ 2 ಶೇಷ್ಠ ತಂಡಗಳು... 204 ಪಂದ್ಯಗಳು, 14 ಸೀಸನ್‌ಗಳು, 11 ಪ್ಲೇಆಫ್‌ಗಳು, 8 ಫೈನಲ್‌ಗಳು, 5 ಟ್ರೋಫಿಗಳು. ಐಪಿಎಲ್​ನಲ್ಲಿ ಇಂದು ನನ್ನ ಕೊನೆಯ ಪಂದ್ಯವಾಡಲು ನಿರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು 38 ವರ್ಷದ ರಾಯುಡು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.