ADVERTISEMENT

ಅಕ್ಷರ್‌ ಪಟೇಲ್‌ ಆಲ್‌ರೌಂಡ್ ಆಟ: ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ

ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನಿರಾಸೆ

ಪಿಟಿಐ
Published 24 ಏಪ್ರಿಲ್ 2023, 19:25 IST
Last Updated 24 ಏಪ್ರಿಲ್ 2023, 19:25 IST
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಗೆಲುವಿನ ಸಂಭ್ರಮ.
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಗೆಲುವಿನ ಸಂಭ್ರಮ.   PTI

ಹೈದರಾಬಾದ್: ಒತ್ತಡವನ್ನು ಮೀರಿನಿಂತ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ತಮ್ಮ ತಂಡಕ್ಕೆ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಜಯ ತಂದುಕೊಟ್ಟರು.

ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ 7 ರನ್‌ಗಳಿಂದ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ಗೆದ್ದಿತು.

ಟಾಸ್‌ ಗೆದ್ದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 144 ರನ್‌ ಗಳಿಸಿತು. ಹೈದರಾಬಾದ್‌ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ADVERTISEMENT

ಸಾಧಾರಣ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡದ ಪರ ಹ್ಯಾರಿ ಬ್ರೂಕ್‌ (7) ಹಾಗೂ ಮಯಂಕ್ ಅಗರ ವಾಲ್‌ (49, 39ಎ, 4X7) ಮೊದಲ ವಿಕೆಟ್‌ ಜೊತೆಯಾಟದಲ್ಲಿ 31 ರನ್ ಸೇರಿಸಿದರು.

ಬ್ರೂಕ್ ಅವರನ್ನು ಬೌಲ್ಡ್ ಮಾಡಿದ ಎನ್ರಿಚ್ ನಾಕಿಯಾ (33ಕ್ಕೆ 2) ಈ ಜೊತೆಯಾಟ ಮುರಿದರು. 12ನೇ ಓವರ್‌ನಲ್ಲಿ ತಂಡದ ಮೊತ್ತ 69 ರನ್‌ಗಳಾಗಿದ್ದಾಗ ಮಯಂಕ್ ಅವರು ಅಕ್ಷರ್ ಪಟೇಲ್‌ (21ಕ್ಕೆ 2) ಅವರಿಗೆ ವಿಕೆಟ್‌ ಒಪ್ಪಿಸಿದರು. ರಾಹುಲ್ ತ್ರಿಪಾಠಿ (15) ಅವರಿಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್‌ ಕ್ಲಾಸೆನ್‌ (31, 19ಎ, 4X3, 6X1) ಅವರ ಹೋರಾಟ ವ್ಯರ್ಥವಾಯಿತು.

ಮುಕೇಶ್ ಕುಮಾರ್ ಮಾಡಿದ ಕೊನೆಯ ಓವರ್‌ನಲ್ಲಿ ಹೈದರಾಬಾದ್ ತಂಡಕ್ಕೆ 13 ರನ್ ಬೇಕಿತ್ತು. ವಾಷಿಂಗ್ಟನ್ ಸುಂದರ್‌ (ಔಟಾಗದೆ 24, 15ಎ) ಹಾಗೂ ಮಾರ್ಕೊ ಜೆನ್ಸೆನ್‌ (2) ಅವರನ್ನು ನಿಯಂತ್ರಿಸಿದ ಮುಕೇಶ್ ಈ ಓವರ್‌ನಲ್ಲಿ ಕೇವಲ 5 ರನ್ ನೀಡಿದರು. ನಿಧಾನಗತಿಯ ಆಟಕ್ಕೆ ಹೈದರಾಬಾದ್‌ ಬ್ಯಾಟರ್‌ಗಳು ದಂಡತೆತ್ತರು.

ಅಕ್ಷರ್‌ ಪಟೇಲ್‌ (34) ತಮ್ಮ ತಂಡಕ್ಕೆ ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡಿದ್ದರು.

ಡೆಲ್ಲಿ ಸಾಧಾರಣ ಮೊತ್ತ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ತಮ್ಮ ಅಮೋಘ ಬೌಲಿಂಗ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದರು. ವಾಷಿಂಗ್ಟನ್ ಮೂರು ವಿಕೆಟ್ ಗಳಿಸಿದರು. ಅಲ್ಲದೇ ಡೆಲ್ಲಿ ತಂಡದ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸುತ್ತಿದ್ದ ಮನೀಷ್ ಪಾಂಡೆ (34; 27ಎ, 4X2) ಅವರು ರನ್‌ಔಟ್ ಆಗಲೂ ವಾಷಿಂಗ್ಟನ್ ಕಾರಣರಾದರು. 

ಡೆಲ್ಲಿ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಮೂರನೇ ಎಸೆತದಲ್ಲಿ ಫಿಲಿಪ್ ಸಾಲ್ಟ್ ಔಟಾದರು. ಇನ್ನೊಂದು ಕಡೆಯಿದ್ದ ನಾಯಕ ಡೇವಿಡ್ ವಾರ್ನರ್ (21; 20ಎ) ಮತ್ತು ಮಿಚೆಲ್ ಮಾರ್ಷ್ (25; 15ಎ) ಇನಿಂಗ್ಸ್‌ ಉತ್ತಮಗೊಳಿಸಲು ಪ್ರಯತ್ನಿಸಿದರು. ಐದನೇ ಓವರ್‌ನಲ್ಲಿ ಎಡಗೈ ಮಧ್ಯಮವೇಗಿ ನಟರಾಜನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಮಾರ್ಷ್ ಬಿದ್ದರು. ಅದರೊಂದಿಗೆ ಜೊತೆಯಾಟ ಮುರಿಯಿತು. 

ಎರಡು ಓವರ್‌ಗಳ ನಂತರ ವಾರ್ನರ್ ವಿಕೆಟ್ ಗಳಿಸಿದ ವಾಷಿಂಗ್ಟನ್ ಸುಂದರ್ ಮಿಂಚಿದರು. ಕ್ರೀಸ್‌ಗೆ ಬಂದ ಸರ್ಫರಾಜ್ ಖಾನ್ ಒಂದು ಸಿಕ್ಸರ್ ಗಳಿಸಿ ವಿಶ್ವಾಸ ಮೂಡಿಸಿದ್ದರು. ಅವರಿಗೂ ವಾಷಿಂಗ್ಟನ್ ಪೆವಿಲಿಯನ್ ದಾರಿ ತೋರಿದರು. 

ಈ ಹಂತದಲ್ಲಿ ದಿಟ್ಟ ಹೋರಾಟ ತೋರಿದವರು ಪಾಂಡೆ ಮತ್ತು ಅಕ್ಷರ್ ಪಟೇಲ್. ಪಾಂಡೆ  ತಾಳ್ಮೆಯಿಂದ ಆಡಿ ರನ್‌ ಗಳಿಸಿದರು. ಅಕ್ಷರ್ ಕೂಡ ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ. ಅಕ್ಷರ್‌ ಅವರ ಆಟದ್ದಲ್ಲಿ ನಾಲ್ಕು ಬೌಂಡರಿಗಳಿದ್ದವು. ಆದರೆ, ಉಳಿದ ಬ್ಯಾಟರ್‌ಗಳೂ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಇದರಿಂದಾಗಿ ಕೊನೆಯ ಹಂತದಲ್ಲಿ ಹೆಚ್ಚು ರನ್‌ಗಳು ತಂಡದ ಖಾತೆಗೆ ಸೇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.