ADVERTISEMENT

IPL 2023: ಕಾನ್ವೇ -ಋತುರಾಜ್ ಅಬ್ಬರ, ಡೆಲ್ಲಿ ಗೆಲುವಿಗೆ 224 ರನ್ ಗುರಿ ನೀಡಿದ ಚೆನ್ನೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2023, 12:59 IST
Last Updated 20 ಮೇ 2023, 12:59 IST
ಡೆವೊನ್ ಕಾನ್ವೇ ಮತ್ತು ಋತುರಾಜ್ ಗಾಯಕವಾಡ್
ಡೆವೊನ್ ಕಾನ್ವೇ ಮತ್ತು ಋತುರಾಜ್ ಗಾಯಕವಾಡ್   

ನವದೆಹಲಿ: ಐಪಿಎಲ್ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಚೆನ್ನೈ ಪರ ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್ವೇ 52 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ ಸಮೇತ 87 ರನ್‌ ಗಳಿಸಿದರು. ಋತುರಾಜ್ ಗಾಯಕವಾಡ್ 50 ಎಸೆತಗಳಲ್ಲಿ 7 ಸಿಕ್ಸರ್‌, 3 ಬೌಂಡರಿ ಸಹಿತ 79 ರನ್ ಗಳಿಸಿ ಮಿಂಚಿದರು.

ADVERTISEMENT

ಇತ್ತ ಶಿವಂ ದುಬೆ 9 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 22 ರನ್ ಗಳಿಸಿದರೆ, ರವೀಂದ್ರ ಜಡೇಜ 7 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಮೇತ 20 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ ಹಾಗೂ ಚೇತನ್ ಜಕಾರಿಯಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸದ್ಯ ಬ್ಯಾಟಿಂಗ್ ಆರಂಭಿಸಿರುವ ಡೆಲ್ಲಿ 11 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ (ಡೇವಿಡ್‌ ವಾರ್ನರ್ ಔಟಾಗದೆ 53 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ).

ಚೆನ್ನೈ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೋಲಿಸಿ ಐಪಿಎಲ್‌ ಪ್ಲೇ ಆಫ್‌ ಸ್ಥಾನಕ್ಕೆ ಅರ್ಹತೆ ಖಚಿತಪಡಿಸಿಕೊಳ್ಳುವ ಗುರಿಹೊಂದಿದೆ. ಇನ್ನೊಂದೆಡೆ ಈಗಾಗಲೇ ಹೊರಬಿದ್ದಿರುವ ಡೆಲ್ಲಿ ತಂಡ ನಿರಾಶಾದಾಯಕ ಅಭಿಯಾನವನ್ನು ಗೆಲುವಿನ ಮೂಲಕ ಕೊನೆಗೊಳಿಸುವ ಪ್ರಯತ್ನ ನಡೆಸಲಿದೆ.

‌ಸದ್ಯ 13 ಪಂದ್ಯಗಳಿಂದ 15 ಪಾಯಿಂಟ್ಸ್‌ ಕಲೆಹಾಕಿರುವ ಧೋನಿ ಬಳಗ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಕೊನೆಯ ಪಂದ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬರದೇ ಹೋದರೆ ಹೊರಬೀಳುವ ಸಾಧ್ಯತೆ ದಟ್ಟವಾಗುತ್ತದೆ. ಗೆದ್ದರೆ ಪ್ಲೇ ಆಫ್‌ ಸ್ಥಾನ ‘ಗ್ಯಾರಂಟಿ’. ಆದರೆ ಎರಡನೇ ಸ್ಥಾನ ಸಿಗಲಿದೆಯೇ ಅಥವಾ ಮೂರನೇ ಸ್ಥಾನ ಪಡೆಯಲಿದೆಯೇ ಎಂಬುದು ದಿನದ ಎರಡನೇ ಪಂದ್ಯದ (ಲಖನೌ– ಕೋಲ್ಕತ್ತ) ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಚೆನ್ನೈ ತಂಡದ ನಿವ್ವಳ ರನ್‌ ದರ (ಎನ್‌ಆರ್‌ಆರ್‌) +0.381 ಆಗಿದೆ. ಲಖನೌ ತಂಡದ ನಿವ್ವಳ ರನ್‌ ದರ +0.304 ಇದೆ. ಲಖನೌ ಕೂಡ 13 ಪಂದ್ಯಗಳಿಂದ 15 ಪಾಯಿಂಟ್ಸ್‌ ಶೇಖರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.