ಅಹಮದಾಬಾದ್: ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಹದಿನಾರನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಗಾಗಿ ಸೆಣಸಲಿವೆ.
58 ದಿನಗಳ ಹಿಂದೆ ಇದೇ ಅಂಗಳದಲ್ಲಿ ಉದ್ಘಾಟನೆಗೊಂಡಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಧೋನಿ ಬಳಗವು ಆತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತ್ತು. ಭಾನುವಾರ ಇಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಧೋನಿಯ ಅನುಭವ ಹಾಗೂ ಯುವ ನಾಯಕ ಹಾರ್ದಿಕ್ ಪಾಂಡ್ಯ ಅವರ ಛಲದ ಆಟವು ರಂಗೇರುವ ನಿರೀಕ್ಷೆ ಇದೆ.
ಕಳೆದ ಒಂದೂವರೆ ತಿಂಗಳಿನಲ್ಲಿ ಉಭಯ ತಂಡಗಳು ಹಲವು ಏರಿಳಿತಗಳನ್ನು ಕಂಡು ಅಂತಿಮ ಸುತ್ತಿಗೆ ಬಂದು ತಲುಪಿವೆ. ಧೋನಿ ಬಳಗವು ಐದನೇ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಅದೇ ಗುಜರಾತ್ ತಂಡವು ಸತತ ಎರಡನೇ ಸಲ ಟ್ರೋಫಿ ತನ್ನದಾಗಿಸಿಕೊಳ್ಳುವ ಛಲದಲ್ಲಿದೆ.
ಹೋದ ವಾರವಷ್ಟೇ ಚೆನ್ನೈನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಧೋನಿ ಬಳಗವು ಅಮೋಘ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಗುಜರಾತ್ ತಂಡವು ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಬಳಗವನ್ನು ಮಣಿಸಿ ಈ ಹಂತಕ್ಕೆ ಬಂದಿದೆ.
ಟೂರ್ನಿಯುದ್ದಕ್ಕೂ ಚೆಂದದ ಬ್ಯಾಟಿಂಗ್ ಮಾಡಿ ಮೂರು ಶತಕಗಳನ್ನು ಗಳಿಸಿರುವ ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಹಾಗೂ ಚೆನ್ನೈ ಬ್ಯಾಟಿಂಗ್‌ನ ಬೆನ್ನೆಲುಬಾಗಿರುವ ಡೆವೊನ್ ಕಾನ್ವೆ ಅವರ ನಡುವಿನ ಹಣಾಹಣಿಯಾಗಿಯೂ ಈ ಪಂದ್ಯ ಗಮನ ಸೆಳೆಯುತ್ತಿದೆ. ಚೆನ್ನೈನ ಋತುರಾಜ್ ಗಾಯಕವಾಡ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಕೂಡ ಅಮೋಘ ಲಯದಲ್ಲಿದ್ದಾರೆ. ಅವರಿಗೆ ಪೈಪೋಟಿಯೊಡ್ಡಲು ಟೈಟನ್ಸ್ ತಂಡದ ವೃದ್ಧಿಮಾನ್ ಸಹಾ, ವಿಜಯ್ ಶಂಕರ್ ಇದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ಮೊಹಮ್ಮದ್ ಶಮಿ ಹಾಗೂ ಸ್ಪಿನ್ನರ್ ರಶೀದ್ ಖಾನ್ ಅವರ ಬಲ ತಂಡಕ್ಕೆ ಇದೆ.
ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಪಾರ ವೈಫಲ್ಯ ಅನುಭವಿಸಿದ್ದ ಯುವ ಬೌಲರ್‌ಗಳನ್ನು ಪಳಗಿಸುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ. ಅದರಿಂದಾಗಿ ಮಥಿಷ್ ಪಥಿರಾಣ, ಮಹೀಷ್ ತೀಕ್ಷಣ ಪಂದ್ಯ ಗೆದ್ದುಕೊಡಬಲ್ಲ ಮಟ್ಟಕ್ಕೆ ಬೆಳೆದಿದ್ದಾರೆ. ಅಲ್ಲದೇ ದೀಪಕ್ ಚಾಹರ್, ಮೊಯಿನ್ ಅಲಿ ಮತ್ತು ರವೀಂದ್ರ ಜಡೇಜ ತಮ್ಮ ಆಲ್‌ರೌಂಡ್ ಆಟದ ಮೂಲಕ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ. ಹೋದ ವರ್ಷದ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲೂ ವಿಫಲವಾಗಿದ್ದ ಚೆನ್ನೈ ತಂಡ ಈ ಬಾರಿ ಪ್ರಶಸ್ತಿ ಸನಿಹ ಬಂದು ನಿಂತಿದೆ. 2021ರಲ್ಲಿ ತಂಡವು ಚಾಂಪಿಯನ್ ಆಗಿತ್ತು.
ಧೋನಿಗಿದು ಕೊನೆಯ ಪಂದ್ಯವೇ?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಯ ಅವರು ಆಡುತ್ತಿರುವ ಕೊನೆಯ ಐಪಿಎಲ್ ಟೂರ್ನಿ ಇದು ಎನ್ನಲಾಗಿದೆ. ಟೂರ್ನಿ ಆರಂಭವಾದಾಗಿನಿಂದಲೂ ಧೋನಿ ಆಟವನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಅದಕ್ಕೆ ಕಾರಣ ಅವರು ಈ ಟೂರ್ನಿಯ ನಂತರ ನಿವೃತ್ತಿಯಾಗುವುದಾಗಿ ಹರಡಿರುವ ಸುದ್ದಿ. ಚೆನ್ನೈ ತಂಡವು ಇದುವರೆಗೆ ಆಡಿರುವ ತಾಣಗಳಲ್ಲಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಹಳದಿ ಪೋಷಾಕು ತೊಟ್ಟ ಅಭಿಮಾನಿಗಳ ದಂಡು ಗಮನ ಸೆಳೆದಿತ್ತು.
ಭಾನುವಾರ ನಡೆಯಲಿರುವ ಫೈನಲ್ ಧೋನಿಯ ಕೊನೆಯ ಪಂದ್ಯವೆಂದೇ ಹೇಳಲಾಗುತ್ತಿದೆ. ಅದರಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ಟಿಕೆಟ್‌ಗಳು ಬಿಕರಿಯಾಗಿವೆ. ಟಿವಿ. ಮೊಬೈಲ್ ಆ್ಯಪ್‌ಗಳಲ್ಲಿಯೂ ಪಂದ್ಯ ವೀಕ್ಷಿಸಲು ಜನರು ಸಿದ್ಧರಾಗಿದ್ದಾರೆ.
ಆದರೆ ಈಚೆಗೆ ಮಾಧ್ಯಮಗೋಷ್ಠಿಯೊಂದರಲ್ಲಿ ಧೋನಿ, ’ಮುಂದಿನ ಹರಾಜು ಪ್ರಕ್ರಿಯೆಗೆ ಏಳೆಂಟು ತಿಂಗಳುಗಳು ಬಾಕಿಯಿವೆ‘ ಎಂದು ಹೇಳಿದ್ದರು. ಆ ಮೂಲಕ ತಾವು ಇನ್ನೂ ನಿವೃತ್ತಿಯ ನಿರ್ಧಾರ ಕೈಗೊಂಡಿಲ್ಲವೆಂಬುದನ್ನು ಸೂಚ್ಯವಾಗಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.