ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸ್ 2023ರ ಐಪಿಎಲ್ ಟೂರ್ನಿಗೆ ಎಡಗೈ ಬ್ಯಾಟರ್ ನಿತೀಶ್ ರಾಣಾ ಅವರನ್ನು ತಂಡದ ನಾಯಕನನ್ನಾಗಿ ಸೋಮವಾರ ಘೋಷಿಸಿದೆ.
ಕಳೆದ ಆವೃತ್ತಿಯಲ್ಲಿ ತಂಡ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರು ಗಾಯಗೊಂಡಿದ್ದು, ಇಡೀ ಟೂರ್ನಿ ತಪ್ಪಿಸಿಕೊಳ್ಳುವ ಆತಂಕವಿದೆ. ಕೆಕೆಆರ್ ಬಿಡುಗಡೆ ಮಾಡಿರುವ ಪ್ರಕಟಣೆ ಗಮನಿಸಿದರೆ, ಅಯ್ಯರ್ ಅವರು ಆರಂಭಿಕ ಹಂತದಲ್ಲಿ ತಂಡಕ್ಕೆ ಮರಳುವುದು ಅನುಮಾನವಾಗಿದೆ.
'ಗಾಯಗೊಂಡಿರುವ ಶ್ರೇಯಸ್ ಚೇತರಿಸಿಕೊಳ್ಳುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ತಂಡ ಮುನ್ನಡೆಸಲಿದ್ದಾರೆ. ಅಯ್ಯರ್ ಚೇತರಿಸಿಕೊಂಡು, ಟೂರ್ನಿಯ ಕೆಲವು ಪಂದ್ಯಗಳನ್ನಾದರೂ ಆಡಬಹುದು ಎಂಬ ವಿಶ್ವಾಸದಲ್ಲಿದ್ದೇವೆ. ನಿತೀಶ್ ಅವರು ದೇಶಿ ಕ್ರಿಕೆಟ್‌ನ ನಿಗದಿತ ಓವರ್ ಮಾದರಿಯಲ್ಲಿ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ಹಾಗೂ ಐಪಿಎಲ್‌ನಲ್ಲಿ 2018ರಿಂದ ಕೆಕೆಆರ್ ಪರ ಆಡಿದ ಅನುಭವ ಹೊಂದಿರುವುದು ಪುಣ್ಯ. ಅವರು ಉತ್ತಮ ನಿರ್ವಹಣೆ ತೋರಲಿದ್ದಾರೆ' ಎಂದು ಪ್ರಕಟಿಸಿದೆ.
ರಾಣಾ ಅವರು ಸಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ್ದರು. 12 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಅವರು 8 ಗೆಲುವು ಮತ್ತು 4 ಸೋಲು ಕಂಡಿದ್ದಾರೆ.
ಐಪಿಎಲ್‌ನಲ್ಲಿ ಕೆಕೆಆರ್ ಪರ 74 ಪಂದ್ಯಗಳನ್ನು ಆಡಿರುವ ಅವರು, 135.61ರ ಸ್ಟ್ರೈಕ್‌ರೇಟ್‌ನಲ್ಲಿ 1,744 ರನ್ ಗಳಿಸಿದ್ದಾರೆ.
ಕೆಕೆಆರ್ ತಂಡ ಈ ಬಾರಿಯ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 1ರಂದು ಕಣಕ್ಕಿಳಿಯಲಿದೆ. ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.