ADVERTISEMENT

CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್

ನಾಗರಾಜ್ ಬಿ.
Published 24 ಏಪ್ರಿಲ್ 2024, 2:35 IST
Last Updated 24 ಏಪ್ರಿಲ್ 2024, 2:35 IST
<div class="paragraphs"><p>ಋತುರಾಜ್ ಗಾಯಕವಾಡ ಹಾಗೂ ಮಾರ್ಕಸ್ ಸ್ಟೊಯಿನಿಸ್</p></div>

ಋತುರಾಜ್ ಗಾಯಕವಾಡ ಹಾಗೂ ಮಾರ್ಕಸ್ ಸ್ಟೊಯಿನಿಸ್

   

(ಪಿಟಿಐ ಚಿತ್ರ)

ಚೆನ್ನೈ: ಮಾರ್ಕಸ್ ಸ್ಟೊಯಿನಿಸ್ ಅಮೋಘ ಶತಕದ (124*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 211 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಲಖನೌ, ಇನ್ನೂ ಮೂರು ಎಸೆತಗಳು ಮಾತ್ರ ಬಾಕಿ ಉಳಿದಿರುವಂತೆಯೇ 19.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಸಿಎಸ್‌ಕೆ ನಾಯಕ ಋತುರಾಜ್ ಗಾಯಕವಾಡ (108*) ಹಾಗೂ ಶಿವಂ ದುಬೆ (66) ಹೋರಾಟವು ವ್ಯರ್ಥವೆನಿಸಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ...

ADVERTISEMENT

ಚೇಸಿಂಗ್ ವೇಳೆ ವೈಯಕ್ತಿಕ ಗರಿಷ್ಠ ಮೊತ್ತ...

ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಅಜೇಯ 124 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ವೇಳೆ ಬ್ಯಾಟರ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 2011ರಲ್ಲಿ ಸಿಎಸ್‌ಕೆ ವಿರುದ್ಧವೇ ಪಾಲ್ ವಾಲ್ತಾಟಿ ಅಜೇಯ 120 ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿತ್ತು.

ಐಪಿಎಲ್ ಚೇಸಿಂಗ್ ವೇಳೆ ವೈಯಕ್ತಿಕ ಗರಿಷ್ಠ ಮೊತ್ತ:

ಮಾರ್ಕಸ್ ಸ್ಟೊಯಿನಿಸ್: 124*

ಪಾಲ್ ವಾಲ್ತಾಟಿ: 120*

ವೀರೇಂದ್ರ ಸೆಹ್ವಾಗ್: 119

ಸಂಜು ಸ್ಯಾಮ್ಸನ್: 119

ಶೇನ್ ವಾಟ್ಸನ್: 117*

ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್:

ಈ ಮೂಲಕ ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ಗರಿಷ್ಠ ಚೇಸಿಂಗ್ ದಾಖಲಾಯಿತು. ಇದರೊಂದಿಗೆ ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧವೇ ಎದುರಾಳಿ ತಂಡ ಪ್ರಾಬಲ್ಯ ಮೆರೆದಿದೆ. ಈ ಹಿಂದೆ 2012ರಲ್ಲಿ ಚೆನ್ನೈ ತಂಡವು ಆರ್‌ಸಿಬಿ ವಿರುದ್ಧ 206 ರನ್ ಚೇಸ್ ಮಾಡಿರುವುದು ಈವರೆಗಿನ ದಾಖಲೆಯಾಗಿತ್ತು.

ಸಿಎಸ್‌ಕೆ ವಿರುದ್ಧ ದಾಖಲಾದ ಎರಡನೇ ಗರಿಷ್ಠ ಚೇಸಿಂಗ್ ಇದಾಗಿದೆ. 2021ರಲ್ಲಿ ಮುಂಬೈ ತಂಡವು ಸಿಎಸ್‌ಕೆ ವಿರುದ್ಧ 219 ರನ್ ಚೇಸಿಂಗ್ ಮಾಡಿತ್ತು. ಇನ್ನು ಲಖನೌ ತಂಡವು ಐಪಿಎಲ್‌ನಲ್ಲಿ ಮೂರನೇ ಬಾರಿ 200ಕ್ಕೂ ಹೆಚ್ಚು ರನ್‌ಗಳ ಚೇಸಿಂಗ್ ಮಾಡುವಲ್ಲಿ ಯಶಸ್ವಿಯಾಯಿತು.

ಮಾರ್ಕಸ್ ಸ್ಟೊಯಿನಿಸ್

ಸ್ಟೊಯಿನಿಸ್ ಚೊಚ್ಚಲ ಶತಕ...

ಐಪಿಎಲ್ ಟೂರ್ನಿಯಲ್ಲಿ ಹಲವು ತಂಡಗಳನ್ನುಪ್ರತಿನಿಧಿಸಿರುವ ಸ್ಟೊಯಿನಿಸ್ ಚೊಚ್ಚಲ ಶತಕ ಸಾಧನೆ ಮಾಡಿದರು. 63 ಎಸೆತಗಳನ್ನು ಎದುರಿಸಿದ ಸ್ಟೊಯಿನಿಸ್ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು. ಆದರೆ ಬೌಲಿಂಗ್‌ನಲ್ಲಿ 49 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.

ಸಿಎಸ್‌ಕೆ ಪರ ಶತಕ ಗಳಿಸಿದ ಮೊದಲ ನಾಯಕ...

ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಪರ ಶತಕ ಗಳಿಸಿದ ಮೊದಲ ನಾಯಕ ಎಂಬ ಖ್ಯಾತಿಗೆ ಋತುರಾಜ್ ಗಾಯಕವಾಡ ಭಾಜನರಾಗಿದ್ದಾರೆ. 60 ಎಸೆತಗಳಲ್ಲಿ ಅಜೇಯ 108 ರನ್ (12 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಐಪಿಎಲ್‌ನಲ್ಲಿ ಶತಕ ಗಳಿಸಿದ ನಾಯಕರ ಪಟ್ಟಿ:

ಕೆ.ಎಲ್.ರಾಹುಲ್ (132*): ಲಖನೌ ಸೂಪರ್ ಜೈಂಟ್ಸ್

ಡೇವಿಡ್ ವಾರ್ನರ್ (126): ಸನ್‌ರೈಸರ್ಸ್ ಹೈದರಾಬಾದ್

ವೀರೇಂದ್ರ ಸೆಹ್ವಾಗ್ (119): ಡೆಲ್ಲಿ ಡೇರ್‌ಡೆವಿಲ್ಸ್

ಸಂಜು ಸ್ಯಾಮ್ಸನ್ (119): ರಾಜಸ್ಥಾನ ರಾಯಲ್ಸ್

ವಿರಾಟ್ ಕೊಹ್ಲಿ(113, 109, 108*, 100*, 100): ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆ್ಯಡಂ ಗಿಲ್‌ಕ್ರಿಸ್ಟ್ (106): ಕಿಂಗ್ಸ್ ಇಲೆವೆನ್ ಪಂಜಾಬ್

ಸಚಿನ್ ತೆಂಡೂಲ್ಕರ್ (100*): ಮುಂಬೈ ಇಂಡಿಯನ್ಸ್

ಋತುರಾಜ್ ಗಾಯಕವಾಡ್ (108*): ಚೆನ್ನೈ ಸೂಪರ್ ಕಿಂಗ್ಸ್

ಶತಕ ಗಳಿಸಿಯೂ ಸೋಲು...

ಐಪಿಎಲ್‌ನಲ್ಲಿ ಋತುರಾಜ್ ಗಾಯಕವಾಡ ಗಳಿಸಿದ ಎರಡನೇ ಶತಕ ಇದಾಗಿದೆ. ಆದರೆ ಎರಡನೇ ಸಲವೂ ತಂಡವು ಸೋಲಿಗೆ ಒಳಗಾಗಿದೆ. ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಮೂರು ಬಾರಿ ಶತಕ ಗಳಿಸಿಯೂ ತಂಡ ಸೋಲಿಗೆ ಒಳಗಾಗಿತ್ತು.

ಋತುರಾಜ್ ಗಾಯಕವಾಡ

ಒಂದೇ ಪಂದ್ಯದಲ್ಲಿ ಎರಡು ಶತಕ...

ಈ ವರ್ಷ ಮೂರನೇ ಸಲ ಸೇರಿದಂತೆ ಒಟ್ಟಾರೆಯಾಗಿ ಐಪಿಎಲ್‌ ಟೂರ್ನಿಯಲ್ಲಿ ಆರನೇ ಬಾರಿಗೆ ಒಂದೇ ಪಂದ್ಯದಲ್ಲಿ ಎರಡು ಶತಕಗಳು ದಾಖಲಾಗಿವೆ. ಈ ಪಂದ್ಯದಲ್ಲಿ ಸಿಎಸ್‌ಕೆ ಪರ ಗಾಯಕವಾಡ ಮತ್ತು ಲಖನೌ ಪರ ಸ್ಟೊಯಿನಿಸ್ ಶತಕ ಸಾಧನೆ ಮಾಡಿದರು.

ಧೋನಿ ಬೌಂಡರಿ..

ಕೇವಲ ಒಂದು ಎಸೆತವನ್ನು ಮಾತ್ರ ಎದುರಿಸಿದ ಸಿಎಸ್‌ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬೌಂಡರಿ ಗಳಿಸಿದರು.

ಮಹೇಂದ್ರ ಸಿಂಗ್ ಧೋನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.