ADVERTISEMENT

IPL 2024 CSK v PBKS | ಚೆನ್ನೈಗೆ ಮತ್ತೆ ಪಂಜಾಬ್‌ ಕಿಂಗ್ಸ್‌ ಸವಾಲು

ಧರ್ಮಶಾಲಾದಲ್ಲಿ ಇಂದು ಮುಖಾಮುಖಿ

ಪಿಟಿಐ
Published 4 ಮೇ 2024, 23:30 IST
Last Updated 4 ಮೇ 2024, 23:30 IST
<div class="paragraphs"><p>ಋತುರಾಜ್ ಗಾಯಕವಾಡ</p></div>

ಋತುರಾಜ್ ಗಾಯಕವಾಡ

   

ಧರ್ಮಶಾಲಾ: ಮೂರು ದಿನಗಳ ಹಿಂದಷ್ಟೇ ಚಿಪಾಕ್‌ನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌,  ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೋಲಿಸಿತ್ತು. ಭಾನುವಾರ ಮತ್ತೊಮ್ಮೆ ಈ ಎರಡು ತಂಡಗಳು  ಮುಖಾಮುಖಿಯಾಗಲಿದ್ದು, ಧರ್ಮಶಾಲಾದಲ್ಲಿ ನಡೆಯುವ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದು.

ಈ ಹಿಂದಿನ ಮೂರು ಪಂದ್ಯಗಳಲ್ಲಿ ಎರಡನ್ನು ಸೋತಿರುವುದು ಹಾಲಿ ಚಾಂಪಿಯನ್ ತಂಡಕ್ಕೆ ಚಿಂತೆ ಮೂಡಿಸಿದೆ. ಪಾಯಿಂಟ್‌ ಪಟ್ಟಿಯಲ್ಲಿ ಅದು 10 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪ್ಲೇ ಆಪ್‌ ಅವಕಾಶ ಜೀವಂತವಾಗಿರಿಸಲು ಗೆಲುವು ಅನಿವಾರ್ಯ. 10 ಪಂದ್ಯಗಳಿಂದ 8 ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿರುವ ಪಂಜಾಬ್‌ ಗೆದ್ದರೆ ಅದೂ ಕ್ಷೀಣ ಅವಕಾಶ ಉಳಿಸಿಸಿಕೊಳ್ಳಲಿದೆ.

ADVERTISEMENT

ಚಿಪಾಕ್‌ನಲ್ಲಿ ಮೊನ್ನೆ ಮುಖಾಮುಖಿಯಾದಾಗ ಮಧ್ಯಮ ಹಂತದ ಓವರುಗಳಲ್ಲಿ ಪಂಜಾಬ್‌ ಸ್ಪಿನ್ನರ್‌ಗಳಾದ ಹರ್‌ಪ್ರೀತ್‌ ಬ್ರಾರ್ ಮತ್ತು ರಾಹುಲ್ ಚಾಹರ್‌, ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು. ಹೀಗಾಗಿ ತಂಡ ನಿರೀಕ್ಷೆಗಿಂತ ಕಡಿಮೆ ಮೊತ್ತ ಗಳಿಸಿತು.

ನಾಯಕ ಋತುರಾಜ್ ಗಾಯಕವಾಡ ಮಾತ್ರ ಸಿಎಸ್‌ಕೆ ಪರ ಸ್ಥಿರ ಪ್ರದರ್ಶನ ನೀಡಿದ್ದು, ತಂಡ ಅವರನ್ನು  ಬಲವಾಗಿ ನೆಚ್ಚಿಕೊಂಡಿದೆ. ಬೇಕಾದ ಹಾಗೆ ಸಿಕ್ಸರ್‌ ಸಿಡಿಸುವ ಶಿವಂ ದುಬೆ ಕೆಲ ಪಂದ್ಯಗಳಲ್ಲಿ ಮಾತ್ರ ಮಿಂಚಿದ್ದಾರೆ. ಉಳಿದವರ ಕೊಡುಗೆ ಅಷ್ಟೇನೂ ಇಲ್ಲ. ಋತುರಾಜ್ ಈ ಬಾರಿ ಐದು ಅರ್ಧ ಶತಕ ಗಳಿಸಿದ್ದಾರೆ. 

ಆದರೆ ಅನುಭವಿ ಅಜಿಂಕ್ಯ ರಹಾನೆ ವಿಫಲರಾಗುತ್ತಿದ್ದಾರೆ. ರವೀಂದ್ರ ಜಡೇಜ ಮತ್ತು ಸಮೀರ್ ರಿಝ್ವಿ ಸ್ಪಿನ್ನರ್‌ಗಳೆದುರು ಪರದಾಡಿದ್ದಾರೆ.

ಅನಾರೋಗ್ಯ ಮತ್ತು ಫಿಟ್ನೆಸ್‌ ಸಮಸ್ಯೆಯೂ ತಂಡವನ್ನು ಬಾಧಿಸುತ್ತಿದೆ. ದೀಪಕ್ ಚಾಹರ್, ಪಂಜಾಬ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಕೇವಲ ಎರಡು ಎಸೆತ ಮಾಡಿ ಹೊರನಡೆದಿದ್ದರು. ಮಥೀಶ ಪಥಿರಾಣ, ತುಷಾರ್‌ ದೇಶಪಾಂಡೆ ಈ ಹಿಂದಿನ ಪಂದ್ಯ ಆಡಿರಲಿಲ್ಲ. ತುಷಾರ್ ಫ್ಲೂನಿಂದ ಬಳಲುತ್ತಿದ್ದಾರೆ.

ಇನ್ನೊಂದು ಕಡೆ, ಸತತ ಎರಡು ಗೆಲುವಿನಿಂದ ಪಂಜಾಬ್ ಉತ್ಸಾಹದಲ್ಲಿದ್ದು, ಪ್ಲೇ ಆಫ್‌ ಮೇಲೆ ಕಣ್ಣಿಟ್ಟಿದೆ. ಅದರ ಪ್ರದರ್ಶನ ಹೀಗೇ ಎಂದು ಹೇಳುವಂತಿಲ್ಲ. ಚಿಪಾಕ್‌ನಲ್ಲಿ ಚೆನ್ನೈ ಮೇಲೆ, ಅಹಮದಾಬಾದಿನಲ್ಲಿ ಗುಜರಾತ್‌ ಮೇಲೆ, ಕೋಲ್ಕತ್ತದಲ್ಲಿ ಕೆಕೆಆರ್ ವಿರುದ್ಧ ದಾಖಲೆ ಮೊತ್ತ ಬೆನ್ನಟ್ಟಿ ಜಯಗಳಿಸಿದ್ದು ಅದರ ಸಾಧನೆ. ಆದರೆ ತವರಿನಲ್ಲಿ ಒದ್ದಾಡಿದೆ.

ಜಾನಿ ಬೆಸ್ಟೊ ಲಯಕ್ಕೆ ಮರಳಿದ್ದಾರೆ. ರೀಲಿ ರೂಸೊ, ಶಶಾಂಕ್ ಸಿಂಗ್‌, ಪ್ರಭಸಿಮ್ರನ್ ಸಿಂಗ್ ಕೂಡ ತಡವಾಗಿ ಲಯಕಂಡುಕೊಂಡಿದ್ದಾರೆ. ಬೌಲಿಂಗ್‌ ವಿಭಾಗ ಕಗಿಸೊ ರಬಾಡ, ಹರ್ಷಲ್ ಪಟೇಲ್‌, ಅರ್ಷದೀಪ್‌, ಸ್ಯಾಮ್‌ ಕರನ್ ಅಂಥ ಅನುಭವಿಗಳನ್ನು ಹೊಂದಿದೆ. ಸ್ಪಿನ್ನರ್‌ಗಳಾದ ಹರ್‌ಪ್ರೀತ್ ಮತ್ತು ರಾಹುಲ್ ಚಾಹರ್ ಕೂಡ ಪರಿಣಾಮಕಾರಿಯಾಗಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.