ADVERTISEMENT

IPL 2024 | ರಾಜಸ್ಥಾನ ಎದುರು ಗೆದ್ದ ಚೆನ್ನೈ; ಆರ್‌ಸಿಬಿ ಪ್ಲೇ ಆಫ್ ಹಾದಿ ಕಠಿಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2024, 13:48 IST
Last Updated 12 ಮೇ 2024, 13:48 IST
<div class="paragraphs"><p>ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಡೆರಿಲ್ ಮಿಚೇಲ್‌ ಹಾಗೂ ಋತುರಾಜ್ ಗಾಯಕವಾಡ್</p></div>

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಡೆರಿಲ್ ಮಿಚೇಲ್‌ ಹಾಗೂ ಋತುರಾಜ್ ಗಾಯಕವಾಡ್

   

ಪಿಟಿಐ ಚಿತ್ರ

ಚೆನ್ನೈ: ರಾಜಸ್ಥಾನ ರಾಯಲ್ಸ್‌ ವಿರುದ್ಧದ ಐಪಿಎಲ್‌ ಟಿ20 ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿತು.

ADVERTISEMENT

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್‌ ನೀಡಿದ 142 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ, 18.2 ಓವರ್‌ಗಳಲ್ಲಿ 145 ರನ್‌ ಗಳಿಸಿತು. ರಚಿನ್‌ ರವೀಂದ್ರ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ಋತುರಾಜ್‌ ಗಾಯಕವಾಡ್‌ (42), ಕೊನೆವರೆಗೂ ಆಡಿ ಗೆಲುವು ತಂದುಕೊಟ್ಟರು.

ರಾಯಲ್ಸ್‌ ಪರ ಆರ್‌.ಅಶ್ವಿನ್‌ 2 ವಿಕೆಟ್‌ ಪಡೆದರೆ, ನಂದ್ರೆ ಬರ್ಜರ್‌ ಮತ್ತು ಯುಜುವೇಂದ್ರ ಚಾಹಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್‌ ಬಳಗ, ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆತಿಥೇಯ ಬೌಲರ್‌ಗಳು ಶಿಸ್ತಿನ ಬೌಲಿಂಗ್‌ ಸಂಘಟಿಸುವ ಮೂಲಕ, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್‌ (24) ಮತ್ತು ಜೋಸ್‌ ಬಟ್ಲರ್‌ (21) ಜೋಡಿ, ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 43 ರನ್ ಗಳಿಸಿದರೂ, ವೇಗವಾಗಿ ರನ್‌ ಗಳಿಸಲಿಲ್ಲ. ಇದರಿಂದಾಗಿ ಆರಂಭದಲ್ಲೇ ಹಿನ್ನಡೆಯಾಯಿತು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌ (15 ರನ್) ಸಹ ಹೆಚ್ಚು ರನ್‌ ಗಳಿಸದೆ ಪೆವಿಲಿಯನ್‌ ಸೇರಿಕೊಂಡರು.

ಕೊನೆಯಲ್ಲಿ ರಿಯಾನ್‌ ಪರಾಗ್ (ಅಜೇಯ 47 ರನ್‌) ಮತ್ತು ಧ್ರುವ್‌ ಜುರೇಲ್‌ (28 ರನ್) ಬಿರುಸಿನ ಬ್ಯಾಟಿಂಗ್‌ ನಡೆಸಿದರೂ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

ಚೆನ್ನೈ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಸಿಮರ್‌ಜಿತ್‌ ಸಿಂಗ್‌ 4 ಓವರ್‌ಗಳಲ್ಲಿ 26 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿದರೆ, ತುಷಾರ್‌ ದೇಶಪಾಂಡೆ ಇಷ್ಟೇ ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಕಿತ್ತರು. ಉಳಿದ ಬೌಲರ್‌ಗಳಿಂದಲೂ ಉತ್ತಮ ಸಹಕಾರ ದೊರೆಯಿತು.

ಆರ್‌ಸಿಬಿ ಹಾದಿ ಕಠಿಣ

ಈ ಗೆಲುವಿನೊಂದಿಗೆ 14 ಪಾಯಿಂಟ್‌ ಕಲೆಹಾಕಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

ಆರ್‌ಸಿಬಿ ಮುಂದಿನ ಹಂತ ಪ್ರವೇಶಿಸ ಬೇಕಾದರೆ, ಮುಂದಿನ ಎರಡೂ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಅಷ್ಟಲ್ಲದೆ, ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತನ್ನ ಪಾಲಿನ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಹಾಗೆಯೇ, ಕ್ರಮವಾಗಿ 5 ಮತ್ತು 6ನೇ ಸ್ಥಾನಗಳಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌, ಲಖನೌ ಸೂಪರ್‌ ಜೈಂಟ್ಸ್‌ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಮುಗ್ಗರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.