ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಏಪ್ರಿಲ್ 18ರಂದು ಮುಲ್ಲಾನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದ ಆರೋಪದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್ ಮತ್ತು ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಅವರಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮದ ಆರ್ಟಿಕಲ್ 2.20ರ ಅಡಿಯಲ್ಲಿ ಲೆವೆಲ್ 1 ನಿಮಯವನ್ನು ಡೇವಿಡ್ ಹಾಗೂ ಪೊಲಾರ್ಡ್ ಉಲ್ಲಂಘಿಸಿದ್ದು, ಮ್ಯಾಚ್ ರೆಫರಿ ವಿಧಿಸಿರುವ ದಂಡವನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಏನಿದು ಘಟನೆ?
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಡಿಆರ್‌ಎಸ್ ಮೇಲ್ಮನವಿ ಮಾಡುವಂತೆ ಡಗೌಟ್‌ನಲ್ಲಿದ್ದ ಟಿಮ್ ಡೇವಿಡ್ ಹಾಗೂ ಕೀರಾನ್ ಪೊಲಾರ್ಡ್, ಸನ್ನೆ ಮಾಡಿದ್ದರು. ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸೂರ್ಯಕುಮಾರ್ ಯಾದವ್‌ಗೆ ಮುಂಬೈ ತಂಡದ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ವೈಡ್ ಎಂದು ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಡಿಆರ್‌ಎಸ್ ಮನವಿಗೆ ಪೊಲಾರ್ಡ್ ಹಾಗೂ ಡೇವಿಡ್ ಸನ್ನೆ ಮಾಡಿರುವುದು ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಬೈ ಡಗೌಟ್‌ನಿಂದ ಆಟಗಾರರಿಗೆ ಸೂಚನೆ ನೀಡುವುದನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್, ತಕ್ಷಣವೇ ಫೀಲ್ಡ್ ಅಂಪೈರ್‌ಗಳ ಗಮನಕ್ಕೆ ತಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.