ದೆಹಲಿ: ನಾಯಕ ರಿಷಭ್ ಪಂತ್ (88*) ಹಾಗೂ ಆಲ್‌ರೌಂಡರ್ ಅಕ್ಷರ್ ಪಟೇಲ್ (66) ಬಿರುಸಿನ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಡೆಲ್ಲಿ ಒಡ್ಡಿದ 225 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಎಂಟು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, 44 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಅಕ್ಷರ್ ಪಟೇಲ್ ಹಾಗೂ ರಿಷಭ್ ಪಂತ್ ಶತಕದ ಜೊತೆಯಾಟದಲ್ಲಿ (113 ರನ್) ಭಾಗಿಯಾದರು.
145 ಐಪಿಎಲ್ ಪಂದ್ಯಗಳಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಎರಡನೇ ಅರ್ಧಶತದ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ಅಕ್ಷರ್ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. 43 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು. ಇದೇ ಪಂದ್ಯದಲ್ಲಿ ಮೂರು ಕ್ಯಾಚ್ ಪಡೆದಿರುವ ಅಕ್ಷರ್ ಒಂದು ವಿಕೆಟ್ ಕಬಳಿಸಿ, ಪಂದ್ಯದ ಎಲ್ಲ ವಿಭಾಗದಲ್ಲೂ ತಮ್ಮ ಕೊಡುಗೆಯನ್ನು ನೀಡಿದರು.
ಡೆಲ್ಲಿ ಕೊನೆಯ ಐದು ಓವರ್‌ನಲ್ಲಿ 97 ಹಾಗೂ ಕೊನೆ ನಾಲ್ಕು ಓವರ್‌ನಲ್ಲಿ 81 ರನ್ ಪೇರಿಸಿತ್ತು. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ, ಐಪಿಎಲ್‌ನ ಕೊನೆಯ ಐದು ಓವರ್‌ನಲ್ಲಿ 112 ರನ್ ಗಳಿಸಿರುವುದು ದಾಖಲೆಯಾಗಿದೆ. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಡೆಲ್ಲಿ ನಾಯಕ ಪಂತ್ ಕೇವಲ 43 ಎಸೆತಗಳಲ್ಲಿ 88 ರನ್ ಗಳಿಸಿ ಔಟಾಗದೆ ಉಳಿದರು. ಅವರ ಸಿಡಿಲಬ್ಬರದ ಇನಿಂಗ್ಸ್‌ನಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳು ಸೇರಿದ್ದವು.
ಇನ್ನು ಡೆಲ್ಲಿ ಪರ ಪಂತ್ ಗಳಿಸಿದ 19ನೇ ಅರ್ಧಶತಕ ಇದಾಗಿದೆ. ಆ ಮೂಲಕ ಡೆಲ್ಲಿ ಪರ ಅತಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್‌ಗಳ ಪೈಕಿ ಶಿಖರ್ ಧವನ್ (18) ಅವರನ್ನು ಪಂತ್ ಹಿಂದಿಕ್ಕಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ 24 ಅರ್ಧಶತಕ ಗಳಿಸಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಕೊನೆಗೆ ಕ್ರೀಸಿಗಿಳಿದ ಟ್ರಿಸ್ಟನ್ ಸ್ಟಬ್ಸ್ ಕೇವಲ 7 ಎಸೆತಗಳಲ್ಲಿ 26 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಬ್ಬರಿಸಿದರು.
ಗುಜರಾತ್‌ನ ಮಧ್ಯಮ ಗತಿಯ ವೇಗಿ ಮೋಹಿತ್ ಶರ್ಮಾ ನಾಲ್ಕು ಓವರ್‌ಗಳಲ್ಲಿ 73 ರನ್ ಬಿಟ್ಟುಕೊಟ್ಟರು. ಆ ಮೂಲಕ ಐಪಿಎಲ್‌ನ ಅತಿ ದುಬಾರಿ ಬೌಲರ್ ಎಂಬ ಅಪಖ್ಯಾತಿಗೆ ಒಳಗಾದರು. ಮೋಹಿತ್ ಅವರ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪಂತ್ ನಾಲ್ಕು ಸಿಕ್ಸರ್ ಸೇರಿದಂತೆ 31 ರನ್ ಸಿಡಿಸಿದರು. ಈ ಹಿಂದೆ 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಾಸಿಲ್ ತಂಪಿ ಆರ್‌ಸಿಬಿ ವಿರುದ್ಧ 70 ರನ್ ಬಿಟ್ಟುಕೊಟ್ಟಿದ್ದರು.
ಐಪಿಎಲ್‌ನ ದುಬಾರಿ ಬೌಲರ್‌ಗಳ ಪಟ್ಟಿ:
ಮೋಹಿತ್ ಶರ್ಮಾ: 0/73
ಬಾಸಿಲ್ ತಂಪಿ: 0/70
ಯಶ್ ದಯಾಳ್: 0/69
ರೀಸ್ ಟಾಪ್ಲಿ: 0/68
ಗುಜರಾತ್ ಪರ ಡೇವಿಡ್ ಮಿಲ್ಲರ್ (55), ಸಾಯಿ ಸುದರ್ಶನ್ (65), ವೃದ್ಧಿಮಾನ್ ಸಹಾ (39), ರಶೀದ್ ಖಾನ್ (21*) ಹಾಗೂ ರವಿಶ್ರೀನಿವಾಸ್ ಸಾಯಿ ಕಿಶೋರ್ (13) ದಿಟ್ಟ ಹೋರಾಟ ನೀಡಿದರು. ಆದರೂ ಪಂದ್ಯ ಗೆಲ್ಲಲಾಗಲಿಲ್ಲ. ಸಾಯಿ ಸುದರ್ಶನ್ 39 ಎಸೆತಗಳಲ್ಲಿ 65 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿದರು. ಡೇವಿಡ್ ಮಿಲ್ಲರ್ 21 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಂತಿಮವಾಗಿ 23 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.
ಗುಜರಾತ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 19 ರನ್ ಹಾಗೂ ಕೊನೆಯ ಎಸೆತದಲ್ಲಿ ಐದು ರನ್‌ಗಳ ಅವಶ್ಯತೆಯಿತ್ತು. ಮುಕೇಶ್ ಕುಮಾರ್ ಅವರ ಅಂತಿಮ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಗಳಿಸಿದ ರಶೀದ್ ಖಾನ್, ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ ಕೊನೆಯ ಎಸೆತದಲ್ಲಿ ರನ್ ಗಳಿಸಲು ವಿಫಲರಾಗುವುದರೊಂದಿಗೆ ಗುಜರಾತ್ ಪರಾಭವಗೊಂಡಿತು. ಆದರೂ ಕೊನೆಯ ನಾಲ್ಕು ಓವರ್‌ಗಳಲ್ಲಿ ಗುಜರಾತ್ 68 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ರಶೀದ್ ಖಾನ್ 11 ಎಸೆತಗಳಲ್ಲಿ 21 ರನ್ ಗಳಿಸಿ (3 ಬೌಂಡರಿ, 1 ಸಿಕ್ಸರ್) ಔಟಾಗದೆ ಉಳಿದರು.
ಡೆಲ್ಲಿ ಪರ ರಾಸಿಖ್ ಸಲಾಂ ಮೂರು ಹಾಗೂ ಕುಲದೀಪ್ ಯಾದವ್ ಎರಡು ವಿಕೆಟ್ ಗಳಿಸಿದರು. ಈ ಮೊದಲು ಗುಜರಾತ್ ಪರ ಸಂದೀಪ್ ವಾರಿಯರ್ 15ಕ್ಕೆ ಮೂರು ವಿಕೆಟ್ ಪಡೆದರು.
ಡೆಲ್ಲಿಗೆ 4ನೇ ಗೆಲುವು...
ಇದರೊಂದಿಗೆ ಒಂಬತ್ತು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್, ಎಂಟು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅಷ್ಟೇ ಪಂದ್ಯಗಳಲ್ಲಿ ಸಮಾನ ಅಂಕ ಹೊಂದಿರುವ ಗುಜರಾತ್ ಏಳನೇ ಸ್ಥಾನದಲ್ಲಿದೆ.
12ನೇ ಸಲ 200 ಪ್ಲಸ್ ರನ್...
ಈ ಬಾರಿಯ ಐಪಿಎಲ್‌ನಲ್ಲಿ ರನ್ ಹೊಳೆ ಹರಿಯುತ್ತಿದ್ದು, 12ನೇ ಸಲ ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶ ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ 224 ರನ್ ಪೇರಿಸಿದ್ದರೆ ಇದಕ್ಕೆ ಉತ್ತರವಾಗಿ ಗುಜರಾತ್ 220 ರನ್ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.