ADVERTISEMENT

IPL 2024 | RR vs DC: ಸಂಜು ಹೋರಾಟ ವ್ಯರ್ಥ; ಡೆಲ್ಲಿಗೆ ಮಣಿದ ರಾಜಸ್ಥಾನ

ಮೆಕ್‌ಗುರ್ಕ್, ಅಭಿಷೇಕ್‌, ಸ್ಟಬ್ಸ್‌ ಬೀಸಾಟ l ರಿಷಭ್‌ ಪಂತ್‌ ಬಳಗದ ಪ್ಲೇ ಅಫ್‌ ಕನಸು ಜೀವಂತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2024, 13:40 IST
Last Updated 7 ಮೇ 2024, 13:40 IST
<div class="paragraphs"><p>ರಾಜಸ್ಥಾನ ವಿರುದ್ಧ ಡೆಲ್ಲಿಗೆ ಗೆಲುವು</p></div>

ರಾಜಸ್ಥಾನ ವಿರುದ್ಧ ಡೆಲ್ಲಿಗೆ ಗೆಲುವು

   

(ಪಿಟಿಐ ಚಿತ್ರ)

ನವದೆಹಲಿ: ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ಸಾಂಘಿಕ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 20 ರನ್‌ಗಳ ಗೆಲುವು ಸಾಧಿಸಿತು.

ADVERTISEMENT

ರಾಯಲ್ಸ್‌ ಪರ ನಾಯಕ ಸಂಜು ಸ್ಯಾಮ್ಸನ್‌ (86; 46ಎ) ಏಕಾಂಗಿಯಾಗಿ ಹೋರಾಡಿದರು. ಅವರಿಗೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಅವರ ನಿರ್ಗಮನದ ನಂತರ ರಾಜಸ್ಥಾನ ತಂಡದ ಗೆಲುವಿನ ಅವಕಾಶವೂ ಕ್ಷಿಣವಾಯಿತು.

ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ‌‌‌‌ರಿಷಭ್‌ ಪಂತ್‌ ಬಳಗವು 12 ಅಂಕ ಸಂಪಾದಿಸಿ ಪಾಯಿಂಟ್‌ ಪಟ್ಟಿಯಲ್ಲಿ ಆರರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ‌‌ ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಮೊದಲ ತಂಡವಾಗಿ ಲಗ್ಗೆ ಹಾಕುವ ರಾಜಸ್ಥಾನ ತಂಡದ ಕನಸಿಗೆ ಕೊಂಚ ಹಿನ್ನಡೆಯಾಯಿತು. ಸಂಜು ಸ್ಯಾಮ್ಸನ್‌ ಪಡೆ ಆಡಿರುವ 11 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಕೋಲ್ಕತ್ತ ನೈಟ್‌ ರೈಸರ್ಸ್‌ ತಂಡವು ಅಗ್ರಸ್ಥಾನ ಕಾಯ್ದುಕೊಂಡಿದೆ.

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಪರ ಆಸ್ಟ್ರೇಲಿಯಾದ ಯುವಪ್ರತಿಭೆ ಜೇಕ್ ಫ್ರೇಸರ್ ಮೆಕ್‌ಗುರ್ಕ್ (50; 20ಎ, 4X7, 6X3) ಹಾಗೂ ಅಭಿಷೇಕ್ ಪೊರೆಲ್‌ (65; 36ಎ, 4X7, 6X3) ಮೊದಲ ವಿಕೆಟ್‌ಗೆ 60 ರನ್ ಸೇರಿಸಿದರು. ನಾಲ್ಕು ಓವರ್‌ಗಳಲ್ಲಿ ಅವರು ಈ ಮೊತ್ತ ಗಳಿಸಿದರು. ಈ ಬುನಾದಿಯ ಮೇಲೆ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ಗಳಿಗೆ 221 ರನ್‌ಗಳ ಸೌಧ ಕಟ್ಟಿತು. 

ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೆ ಮೊದಲ ಓವರ್‌ನಲ್ಲೇ ಖಲೀಲ್‌ ಅಹಮ್ಮದ್‌ ಪೆಟ್ಟು ನೀಡಿದರು. ಯಶಸ್ವಿ ಜೈಸ್ವಾಲ್‌ (4) ಅವರನ್ನು ಬೇಗನೇ ವಾಪಸ್‌ ಕಳುಹಿಸಿದರು. ನಂತರ ಜೋಸ್ ಬಟ್ಲರ್‌ (19) ಮತ್ತು ಸಂಜು ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಬಿರುಸಿನ 63 ರನ್‌ (33ಎ) ಸೇರಿಸಿದರು.

ಆದರೆ, ಬಟ್ಲರ್‌ ನಿರ್ಗಮಿಸಿದ ನಂತರ ರಿಯಾನ್‌ ಪರಾಗ್‌ (27; 22ಎ), ಶುಭಂ ದುಬೆ (25; 12ಎ) ಅವರೂ ಹೆಚ್ಚು ಪ್ರತಿರೋಧ ತೋರಲಿಲ್ಲ. ಸಂಜು ಮಾತ್ರ ಡೆಲ್ಲಿ ಬೌಲರ್‌ಗಳನ್ನು ಕೆಲ ಹೊತ್ತು ಕಾಡಿದರು. ಅವರ ಬ್ಯಾಟ್‌ನಿಂದ ಎಂಟು ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್‌ಗಳು ಬಂದವು. ರೋವ್ಮನ್‌ ಪೊವೆಲ್‌ (13), ಡೊನೊವನ್ ಫೆರೆರಾ (1) ನಿರಾಸೆ ಮೂಡಿಸಿದರು. ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 201 ರನ್‌ ಗಳಿಸಲಷ್ಟೇ ಶಕ್ತವಾಯಿತು. ಖಲೀಲ್‌ ಅಹಮ್ಮದ್‌, ಮುಕೇಶ್‌ ಕುಮಾರ್‌ ಮತ್ತು ಕುಲದೀಪ್‌ ಯಾದವ್‌ ತಲಾ ಮೂರು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಡೆಲ್ಲಿಯ ಆರಂಭಿಕ ಬ್ಯಾಟರ್‌ಗಳಾದ ಮೆಕ್‌ಗುರ್ಕ್ ಮತ್ತು ಅಭಿಷೇಕ್ ಮಿಂಚಿನ ಅರ್ಧ ಶತಕ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಟ್ರಿಸ್ಟನ್ ಸ್ಟಬ್ಸ್ (41; 20ಎ, 4X3, 6X3) ಹಾಗೂ ಪದಾರ್ಪಣೆ ಪಂದ್ಯ ಆಡಿದ ಗುಲ್ಬದೀನ್ ನೈಬ್ (19; 15ಎ, 4X1, 6X1) ಮಹತ್ವದ ಕಾಣಿಕೆ ನೀಡಿದರು. ‌‌

ಅವರ ಬೀಸಾಟದ ನೆರವಿನಿಂದ ಕೊನೆಯ ಐದು ಓವರ್‌ಗಳಲ್ಲಿ ತಂಡದ ಮೊತ್ತಕ್ಕೆ 65 ರನ್‌ಗಳು ಹರಿದು ಬಂದವು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಇಲ್ಲದಿದ್ದರೆ 200ರ ಗಡಿ ದಾಟುವುದು ಸುಲಭವಾಗಿರಲಿಲ್ಲ.  ಏಕೆಂದರೆ; ಉತ್ತಮ ಆರಂಭ ಸಿಕ್ಕರೂ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕ ಆರ್. ಅಶ್ವಿನ್ (24ಕ್ಕೆ3) ಸ್ಪಿನ್ ಮೋಡಿಯ ಮುಂದೆ ಕುಸಿಯಿತು. ಇದರಿಂದಾಗಿ ಆತಿಥೇಯ ತಂಡವು 13.5 ಓವರ್‌ಗಳಲ್ಲಿ 150 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಟೂರ್ನಿಯಲ್ಲಿ ಸಫಲ ಬೌಲರ್‌ ಎನಿಸಿಕೊಂಡಿದ್ದ ರಾಯಲ್ಸ್‌ನ ಟ್ರೆಂಟ್‌ ಬೌಲ್ಟ್ ಮತ್ತು ಆವೇಶ್ ಖಾನ್ ಅವರು ಈ ಪಂದ್ಯದಲ್ಲಿ ದುಬಾರಿಯಾದರು. ಅದರಲ್ಲೂ ಜೇಕ್ ಫ್ರೇಸರ್ ಅವರ ಬಿರುಸಾದ ಹೊಡೆತಗಳಿಗೆ ಇಬ್ಬರೂ ಅವಾಕ್ಕಾದರು. ಅವರು 250ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಬೌಲ್ಟ್‌ ಓವರ್‌ನಲ್ಲಿ ಎಸೆತವೊಂದು ಅವರ ಕಿಬೊಟ್ಟೆಗೆ ಅಪ್ಪಳಿಸಿತು. ಇದರಿಂದ ನೋವಿನಿಂದ ಕುಸಿದ ಅವರಿಗೆ ತಂಡದ ಫಿಸಿಯೊ ಧಾವಿಸಿ ಬಂದು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಫ್ರೇಸರ್ ಬ್ಯಾಟಿಂಗ್ ಮುಂದುವರಿಸಿದರು.

ಜೇಕ್ ಫ್ರೆಸರ್ ದಾಖಲೆ

ಐಪಿಎಲ್‌ ಟೂರ್ನಿಯಲ್ಲಿ 20 ಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಮೂರು ಅರ್ಧಶತಕಗಳನ್ನು ಹೊಡೆದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಡೆಲ್ಲಿಕ್ಯಾಪಿಟಲ್ಸ್ ತಂಡದ ಜೇಕ್ ಫ್ರೆಸರ್ ಮೆಕ್‌ಗುರ್ಕ್ ಪಾತ್ರರಾದರು. 

ಅವರು ರಾಜಸ್ಥಾನ ಎದುರಿನ ಪಂದ್ಯದಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.  ಇದೇ ಟೂರ್ನಿಯಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ (15 ಎಸೆತ) ಹಾಗೂ ಮುಂಬೈ ಇಂಡಿಯನ್ಸ್‌ (15 ಎಸೆತ) ಅರ್ಧಶತಕಗಳನ್ನು ದಾಖಲಿಸಿದ್ದರು. 

ಯಶಸ್ವಿ ಜೈಸ್ವಾಲ್, ನಿಕೊಲಸ್ ಪೂರನ್, ಇಶಾನ್ ಕಿಶನ್, ಸುನಿಲ್ ನಾರಾಯಣ್, ಕೀರನ್ ಪೊಲಾರ್ಡ್, ಟ್ರಾವಿಸ್ ಹೆಡ್ ಹಾಗೂ ಕೆ.ಎಲ್. ರಾಹುಲ್ ಅವರು ತಲಾ 2 ಬಾರಿ ಇಂತಹ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.