ADVERTISEMENT

ಧೋನಿ ಚೆನ್ನೈನ ಭಗವಂತ, ಅವರ ಹೆಸರಲ್ಲಿ ದೇವಾಲಯಗಳು ನಿರ್ಮಾಣವಾಗುತ್ತವೆ: ರಾಯುಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2024, 13:13 IST
Last Updated 13 ಮೇ 2024, 13:13 IST
<div class="paragraphs"><p>ಮಹೇಂದ್ರ ಸಿಂಗ್‌ ಧೋನಿ&nbsp;</p></div>

ಮಹೇಂದ್ರ ಸಿಂಗ್‌ ಧೋನಿ 

   

ಪಿಟಿಐ ಚಿತ್ರಗಳು

ಚೆನ್ನೈ: ಭಾರತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಿನಲ್ಲಿ ದೇವಾಲಯಗಳು ನಿರ್ಮಾಣವಾಗಲಿವೆ ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ.

ADVERTISEMENT

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ 5 ವಿಕೆಟ್‌ಗಳ ಗೆಲುವು ಸಾಧಿಸಿತು. ರಾಜಸ್ಥಾನ ನೀಡಿದ್ದ 141 ರನ್‌ಗಳ ಗುರಿಯನ್ನು ಚೆನ್ನೈ 18.2 ಓವರ್‌ಗಳಲ್ಲೇ ತಲುಪಿತು.

ಈ ಪಂದ್ಯವು ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ತಂಡ ತವರಿನಲ್ಲಿ ಆಡಿದ ಕೊನೇ ಪಂದ್ಯವಾಗಿದೆ. ಹೀಗಾಗಿ, ಕ್ರೀಡಾಂಗಣದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಪಂದ್ಯದುದ್ದಕ್ಕೂ 'ಸಿಎಸ್‌ಕೆ', 'ಧೋನಿ', 'ತಲಾ' ಎಂದು ಘೋಷಣೆಗಳನ್ನು ಕೂಗಿದ್ದರು. ಈ ಕುರಿತು ಪಂದ್ಯದ ಬಳಿಕ ಮಾತನಾಡಿರುವ ರಾಯುಡು, 'ಧೋನಿ ಚೆನ್ನೈನ ಭಗವಂತ. ಮುಂದಿನ ದಿಗನಳಲ್ಲಿ ಅವರ ಹೆಸರಲ್ಲಿ ದೇವಾಲಯಗಳು ನಿರ್ಮಾಣಗೊಳ್ಳುವ ಬಗ್ಗೆ ನನಗೆ ಖಾತ್ರಿ ಇದೆ' ಎಂದಿದ್ದಾರೆ.

'ಅವರೊಬ್ಬ (ಧೋನಿ) ದಂತಕತೆ. ಹಾಗಾಗಿ, ಎಲ್ಲರೂ ಅವರ ಆಟವನ್ನು ಸಂಭ್ರಮಿಸುತ್ತಾರೆ. ಬಹುಶಃ ಚೆನ್ನೈನಲ್ಲಿ ಇದು ಅವರ ಕೊನೇ ಪಂದ್ಯ ಎಂದು ಅಭಿಮಾನಿಗಳು ಭಾವಿಸಿರಬಹುದು' ಎಂದಿದ್ದಾರೆ.

ಟೀಂ ಇಂಡಿಯಾದ ನಾಯಕರಾಗಿದ್ದ ಧೋನಿ, ಭಾರತಕ್ಕೆ ಟಿ20 ಹಾಗೂ ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಎರಡು ಸಲ ಚಾಂಪಿಯನ್ಸ್‌ ಲೀಗ್‌ ಮತ್ತು ಐದು ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಚೆನ್ನೈ ತಂಡದ ಮುಡಿಗೇರಿಸಿದ್ದಾರೆ.

'ಧೋನಿ, ಭಾರತಕ್ಕೆ ಎರಡು ಬಾರಿ ವಿಶ್ವಕಪ್‌ ಮತ್ತು ಚೆನ್ನೈಗೆ ಸಾಕಷ್ಟು ಸಲ ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅವರು ತಂಡಕ್ಕಾಗಿ, ದೇಶ ಮತ್ತು ಸಿಎಸ್‌ಕೆಗಾಗಿ ಸಹ ಆಟಗಾರರ ಮೇಲೆ ವಿಶ್ವಾಸವಿಡುತ್ತಾರೆ' ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ, ಚೆನ್ನೈ ತಂಡ ಪ್ಲೇ ಆಫ್‌ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿರುವ ಈ ತಂಡ ಪಾಯಿಂಟ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು ನಡೆಯಲಿರುವ ಆ ಪಂದ್ಯದಲ್ಲಿ ಗೆದ್ದರೆ, ಸಿಎಸ್‌ಕೆ ನೇರವಾಗಿ ಪ್ಲೇ ಆಫ್‌ ತಲುಪುವ ಸಾಧ್ಯತೆ ಇದೆ. ಒಂದುವೇಳೆ ಆರ್‌ಸಿಬಿ ಗೆದ್ದರೆ, ಇತರ ಪಂದ್ಯಗಳ ಫಲಿತಾಂಶವೂ ಮುಖ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.