ADVERTISEMENT

IPL 2024 | ಕೆಕೆಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಜಯ ಅನಿವಾರ್ಯ

ಪಿಟಿಐ
Published 12 ಮೇ 2024, 23:30 IST
Last Updated 12 ಮೇ 2024, 23:30 IST
ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ . ಎಎಫ್‌ಪಿ ಚಿತ್ರ
ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ . ಎಎಫ್‌ಪಿ ಚಿತ್ರ    

ಅಹಮದಬಾದ್: ನಾಯಕ ಶುಭಮನ್ ಗಿಲ್ ಲಯಕ್ಕೆ ಮರಳಿರುವುದು ಗುಜರಾತ್ ಟೈಟನ್ಸ್‌ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿದೆ.  ಸೋಮವಾರ ಬಲಿಷ್ಠ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯಿಸುವ ಹುಮ್ಮಸ್ಸಿನಲ್ಲಿದೆ.

ಕಳೆದ ಪಂದ್ಯದಲ್ಲಿ ಗಿಲ್ ಮತ್ತು ಸುದರ್ಶನ್ ಅವರ ‘ಅವಳಿ’ ಶತಕ ಭರಾಟೆಯಿಂದ ಆತಿಥೇಯ ತಂಡ ದೊಡ್ಡ ಮೊತ್ತ ಪೇರಿಸಿತು.  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸುಲಭ ಜಯ ಸಾಧಿಸುವುದರೊಂದಿಗೆ ಟೈಟನ್ಸ್ ಪ್ಲೇಆಫ್ ಆಸೆ ಜೀವಂತವಾಗಿರಿಸಿದೆ.

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಪ್ರವೇಶ ಪಡೆದಿರುವ ಮೊದಲ ತಂಡವಾಗಿರುವ ಕೆಕೆಆರ್‌ ಎದುರಿಸುವುದು ಸುಲಭವಲ್ಲ.  

ADVERTISEMENT

ಏಳು ತಂಡಗಳು ಇನ್ನೂ ಪ್ಲೇಆಫ್ ರೇಸ್‌ನಲ್ಲಿವೆ. ರಾಜಸ್ಥಾನ ರಾಯಲ್ಸ್ (16) ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (14), ಸನ್‌ರೈಸರ್ಸ್‌ ಹೈದರಾಬಾದ್ (14) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಲಾ 12 ಅಂಕಗಳನ್ನು ಹೊಂದಿವೆ.

ಗುಜರಾತ್ ಟೈಟನ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಅಂಕಗಳನ್ನು ಹೊಂದಿದ್ದು, ಈ ಎರಡು ತಂಡಗಳು ಉಳಿದೆರಡು ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ತಲುಪಬಹುದು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಕೆಳ ಮಟ್ಟದಲ್ಲಿರುವ ಟೈಟನ್ಸ್‌ಗೆ ಅವಕಾಶ ಕಡಿಮೆ ಮತ್ತು ಮಾಜಿ ಚಾಂಪಿಯನ್‌ ಅಗ್ರ ನಾಲ್ಕರಲ್ಲಿ ಅವಕಾಶ ಪಡೆಯುವುದು ಪವಾಡವಾಗಿದೆ.‌

ಆದಾಗ್ಯೂ, ಒಂದು ವಿಷಯ ಸ್ಪಷ್ಟ. ಪ್ಲೇಆಫ್‌ಗೆ ಪ್ರವೇಶ ಪಡೆಯಬೇಕಾದರೆ ಟೈಟನ್ಸ್‌ ಎರಡು ಪಂದ್ಯಗಳಲ್ಲಿ ಉತ್ತಮ ರನ್ ಸರಾಸರಿಯೊಂದಿಗೆ ಭಾರಿ ಅಂತರದ ಗೆಲುವು ದಾಖಲಿಸಬೇಕಾಗುತ್ತದೆ. ಸಣ್ಣ ಅವಕಾಶವನ್ನೇ ಮೆಟ್ಟಿಲಾಗಿ ಬಳಸಿಕೊಳ್ಳಬೇಕಿದೆ.  

ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ ಮತ್ತು ರಶೀದ್ ಖಾನ್ ಅವರ ಮೇಲೆ ನಿರೀಕ್ಷೆಯ ಭಾರವಿದೆ.  

ಕೆಕೆಆರ್‌ಗೆ ತಂಡದ ಸುನಿಲ್ ನಾರಾಯಣ (461 ರನ್ ಮತ್ತು 15 ವಿಕೆಟ್) ಅವರ ಆಲ್‌ರೌಂಡ್‌ ಆಟ ಹಾಗೂ  ಆ್ಯಂಡ್ರೆ ರಸೆಲ್ ಈ ಋತುವಿನಲ್ಲಿ 222 ರನ್ ಮತ್ತು 15 ವಿಕೆಟ್‌ ಪಡೆದು ಉತ್ತಮ ಫಾರ್ಮ್‌ನಲ್ಲಿರುವುದು ವರದಾನವಾಗಿದೆ. ಲೆಗ್ ಸ್ಪಿನ್ನರ್‌ ವರುಣ್ ಚಕ್ರವರ್ತಿ 18 ವಿಕೆಟ್ ಪಡೆದು ಉತ್ತಮ ಲಯದಲ್ಲಿದ್ದಾರೆ. ಫಿಲ್ ಸಾಲ್ಟ್‌ ಸಹ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಆದರೆ ಕಳೆದ ಮೂರು ಇನಿಂಗ್ಸ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದಾರೆ.

ಪಿಚ್‌ ‌ಬ್ಯಾಟರ್ ಸ್ನೇಹಿ ಎಂಬುದು ಸಾಬೀತಾಗಿದೆ. ಕೆಲವು ಬೃಹತ್‌ ಮೊತ್ತದ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಟೈಟನ್ಸ್‌ ತಂಡ ಕೆಕೆಆರ್ ಅನ್ನು ಎರಡು ಬಾರಿ ಸೋಲಿಸಿದೆ.  

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಕೋಲ್ಕತ್ತ ನೈಟ್ ರೈಡರ್ಸ್‌ನ ಸುನಿಲ್ ನಾರಾಯಣ – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.