ಅಹಮದಾಬಾದ್: ನಾಯಕ ಶುಭಮನ್ ಗಿಲ್ ಬಿರುಸಿನ ಅರ್ಧಶತಕದ (89*) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಇಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ.
ಆ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 200 ರನ್‌ಗಳ ಬೃಹತ್ ಗುರಿ ಒಡ್ಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗಿಲ್ ರಂಜಿಸಿದರು.
ಪಂಜಾಬ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದರು. ಅವರಿಗೆ ಕೇನ್ ವಿಲಿಯಮ್ಸನ್ (26) ಹಾಗೂ ಸಾಯ್ ಸುದರ್ಶನ್ (33) ಉಪಯುಕ್ತ ನೆರವು ನೀಡಿದರು.
ಉಳಿದಂತೆ ವೃದ್ಧಿಮಾನ್ ಸಹಾ 11 ಹಾಗೂ ವಿಜಯ್ ಶಂಕರ್ 8 ರನ್ ಗಳಿಸಿದರು. ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ ಅಜೇಯ 23 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು.
31 ಎಸೆತಗಳಲ್ಲಿ ಪ್ರಸಕ್ತ ಸಾಲಿನ ಐಪಿಎಲ್‌ನ ಮೊದಲ ಅರ್ಧಶತಕವನ್ನು ಗಿಲ್ ಪೂರ್ಣಗೊಳಿಸಿದರು. ಅರ್ಧಶತಕದ ಬಳಿಕ ಗುಜರಾತ್ ಬೃಹತ್ ಮೊತ್ತ ಪೇರಿಸಲು ನೆರವಾದರು. ಗುಜರಾತ್ ಪರ ಕಗಿಸೋ ರಬಾಡ ಎರಡು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ...
ಈ ಮೊದಲು ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ದಾಖಲಿಸಿದೆ. ಮತ್ತೊಂದೆಡೆ ಪಂಜಾಬ್ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಒಂದರಲ್ಲಿ ಮಾತ್ರ ಗೆಲುವು ದಾಖಲಿಸಿದೆ.
ತಂಡಗಳ ಬಲಾಬಲ...
ಕಳೆದ ಪಂದ್ಯದಲ್ಲಿ ಮಯಂಕ್ ಯಾದವ್ ಅವರ ವೇಗದ ದಾಳಿಗೆ ಕಂಗೆಟ್ಟಿದ್ದ ಪಂಜಾಬ್ ಕಿಂಗ್ಸ್, ಮೊಟೆರಾದಲ್ಲಿ ಇಂದು ನಡೆಯುವ ಐಪಿಎಲ್ ಮುಖಾಮುಖಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಒಂದೆಡೆ, ತವರಿನಿಂದ ಹೊರಗೆ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಶಿಖರ್ ಧವನ್ ಪಡೆ, ಚೈತನ್ಯ ನೀಡುವ ಗೆಲುವಿಗೆ ಯತ್ನಿಸಲಿದೆ. ಇನ್ನೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೇಲೆ ಏಳು ವಿಕೆಟ್‌ಗಳ ಸುಲಭ ಜಯ ಪಡೆದಿರುವ ಗುಜರಾತ್ ಟೈಟನ್ಸ್ ತವರಿಗೆ ಈ ಪಂದ್ಯವಾಡಲು ಆತ್ಮವಿಶ್ವಾಸದಿಂದ ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.