ADVERTISEMENT

IPL 2024 | KKR vs MI: ‌ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ-ಆಫ್‌ಗೆ ಲಗ್ಗೆ

ರಾಣಾ, ವರುಣ್‌ಗೆ ತಲಾ ಎರಡು ವಿಕೆಟ್: ಮುಂಬೈ ಇಂಡಿಯನ್ಸ್‌ಗೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2024, 15:43 IST
Last Updated 11 ಮೇ 2024, 15:43 IST
<div class="paragraphs"><p>ಆ್ಯಂಡ್ರೆ ರಸೆಲ್</p></div>

ಆ್ಯಂಡ್ರೆ ರಸೆಲ್

   

(ಪಿಟಿಐ ಚಿತ್ರ)

ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ತಂಡ ಈ ವರ್ಷದ ಐಪಿಎಲ್‌ನಲ್ಲಿ ಪ್ಲೇಆಫ್‌ ಪ್ರವೇಶಿಸಿತು. ಈ ಸಾಧನೆ ಮಾಡಿದ ಮೊದಲ ತಂಡ ಇದಾಗಿದೆ.

ADVERTISEMENT

ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್ ನಾಯಕತ್ವದ ತಂಡ 18 ರನ್‌ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿತು.  


158 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡವನ್ನು ಕೋಲ್ಕತ್ತ ಬೌಲರ್‌ಗಳು ಕಟ್ಟಿಹಾಕಿದರು. 16 ಓವರ್‌ಗಳಲ್ಲಿ 8 ವಿಕೆಟ್‌ಗೆ 139 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

 ಹರ್ಷಿತ್ ರಾಣಾ (34ಕ್ಕೆ2), ವರುಣ್ ಚಕ್ರವರ್ತಿ (17ಕ್ಕೆ2) ಹಾಗೂ ಆ್ಯಂಡ್ರೆ ರಸೆಲ್ (34ಕ್ಕೆ2) ಪರಿಣಾಮಕಾರಿ ಬೌಲಿಂಗ್ ಮಾಡಿದರು. ಕೊನೆ ಓವರ್‌ನಲ್ಲಿ ದಾಳಿಗಿಳಿದ ರಾಣಾ ಅವರು ತಿಲಕ್‌ ಹಾಗೂ ನಮನ್ ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.


ಇಶಾನ್ ಕಿಶಾನ್ (40, 22ಎ), ತಿಲಕ್ ವರ್ಮಾ (32, 17ಎ) ಹಾಗೂ ನಮನ್ ಧೀರ್ (17,6ಎ) ಅವರ ಪ್ರಯತ್ನ ಕೈಗೂಡಲಿಲ್ಲ. 


ಪಂದ್ಯಕ್ಕೂ ಮುನ್ನ ಮಳೆ ಬಂದ ಕಾರಣ ಇನಿಂಗ್ಸ್ ಅನ್ನು 16 ಓವರ್‌ಗಳಿಗೆ ನಿಗದಿ ಪಡಿಸಲಾಯಿತು. 

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡಕ್ಕೆ ಆರಂಭದಲ್ಲಿಯೇ ಬಲವಾದ ಪೆಟ್ಟುಕೊಟ್ಟಿತು. 


ಕೋಲ್ಕತ್ತ ತಂಡವು 10 ಓವರ್‌ಗಳಲ್ಲಿ 97 ರನ್‌ಗಳಿಗೆ 4 ವಿಕೆಟ್‌ಗಳನ್ಜು ಕಳೆದುಕೊಂಡಿತು. ಆರಂಭದಲ್ಲಿಯೇ ಕುಸಿದ ತಂಡಕ್ಕೆ ವೆಂಕಟೇಶ್ ಅಯ್ಯರ್ (42; 21ಎ) ಮರುಜೀವ ತುಂಬಿದರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ನುವಾನ್ ತುಷಾರ ಬೌಲಿಂಗ್‌ನಲ್ಲಿ ಫಿಲಿಪ್ ಸಾಲ್ಟ್ ಅವರು ಔಟಾದರು. ‌


ಸಿಕ್ಸರ್ ಹೊಡೆದು ತಮ್ಮ ಖಾತೆ ತೆರೆದಿದ್ದ ಸಾಲ್ಟ್‌ ಅವರಿಗೆ ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 
ಎರಡನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಎಸೆತದ ವೇಗವನ್ನು ಅಂದಾಜು ಮಾಡುವಲ್ಲಿ ಎಡವಿದ ಸುನಿಲ್ ನಾರಾಯಣ ಕ್ಲೀನ್‌ಬೌಲ್ಡ್ ಆದರು. ಟೂರ್ನಿಯಲ್ಲಿ ಹಲವು ಸ್ಫೋಟಕ ಇನಿಂಗ್ಸ್ ಆಡಿರುವ ಸುನಿಲ್ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ. 


ಶ್ರೇಯಸ್ ಅಯ್ಯರ್  ಕೇವಲ ಏಳು ರನ್ ಗಳಿಸಿ ಔಟಾದರು. ಅವರು ಅನ್ಷುಲ್ ಕಾಂಭೋಜ್ ಎಸೆತದಲ್ಲಿ ಬೌಲ್ಡ್‌ ಆದರು. ಆದರೆ ಇನ್ನೊಂದೆಡೆ ವೆಂಕಟೇಶ್ ಬ್ಯಾಟ್ ಬೀಸುತ್ತಿದ್ದರು. ಆರು ಬೌಂಡರಿ ಮತ್ತು 2 ಸಿಕ್ಸರ್ ಹೊಡೆದರು. 


9ನೇ ಓವರ್‌ನಲ್ಲಿ ಸ್ಪಿನ್ನರ್ ಚಾವ್ಲಾ ಎಸೆತವನ್ನು ಆಡುವ ಭರದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಕ್ಯಾಚಿತ್ತ ವೆಂಕಟೇಶ್ ಇನಿಂಗ್ಸ್‌ಗೆ ತೆರೆಬಿತ್ತು. ಕೇವಲ 8 ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. 

ನಿತೀಶ್ ರಾಣಾ (33) ಹಾಗೂ ಆ್ಯಂಡ್ರೆ ರಸೆಲ್ (24) ತಂಡದ ಮೊತ್ತ ಹೆಚ್ಷಿಸುವಂತಹ ಬೀಸಾಟವಾಡಿದರು. 

ಸಂಕ್ಷಿಪ್ತ ಸ್ಕೋರು:

ಕೋಲ್ಕತ್ತ ನೈಟ್ ರೈಡರ್ಸ್: 16 ಓವರ್‌ಗಳಲ್ಲಿ 7 ಕ್ಕೆ 157 (ವೆಂಕಟೇಶ್ ಅಯ್ಯರ್ 42, ನಿತೀಶ್ ರಾಣಾ  33, ಆ್ಯಂಡ್ರೆ ರಸೆಲ್ ಬ್ಯಾಟಿಂಗ್ 24, ಜಸಪ್ರೀತ್ ಬೂಮ್ರಾ 39ಕ್ಕೆ2, ಪೀಯೂಷ್‌ ಚಾವ್ಲಾ 28ಕ್ಕೆ2) 

ಮುಂಬೈ ಇಂಡಿಯನ್ಸ್‌; 16 ಓವರ್‌ಗಳಲ್ಲಿ 8 ವಿಕೆಟ್‌ಗೆ 139 (ಇಶಾನ್ ಕಿಶಾನ್ 40, ತಿಲಕ್ ವರ್ಮಾ 32, ಹರ್ಷಿತ್ ರಾಣಾ 34ಕ್ಕೆ2, ವರುಣ್ ಚಕ್ರವರ್ತಿ 17ಕ್ಕೆ2) 

ಪಂದ್ಯ ಶ್ರೇಷ್ಠ: ವರುಣ್ ಚಕ್ರವರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.