ADVERTISEMENT

IPL 2024 | ಜಾನಿ ಶತಕ; ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2024, 18:11 IST
Last Updated 26 ಏಪ್ರಿಲ್ 2024, 18:11 IST
<div class="paragraphs"><p>ರನ್‌ಗಾಗಿ ಓಡಿದ ಜಾನಿ ಬೆಸ್ಟೊ ಹಾಗೂ ರೀಲಿ ರೊಸೊ</p></div>

ರನ್‌ಗಾಗಿ ಓಡಿದ ಜಾನಿ ಬೆಸ್ಟೊ ಹಾಗೂ ರೀಲಿ ರೊಸೊ

   

ಪಿಟಿಐ ಚಿತ್ರ

ಕೋಲ್ಕತ್ತ: ದೀರ್ಘ ಕಾಲದಿಂದ ವೈಫಲ್ಯ ಅನುಭವಿಸುತ್ತಲೇ ಇದ್ದ ಜಾನಿ ಬೆಸ್ಟೊ ಶುಕ್ರವಾರ ಲಯಕ್ಕೆ ಮರಳಿದರು. ಅವರ ಅಬ್ಬರದ ಶತಕದ ಮೂಲಕ ಪಂಜಾಬ್ ಕಿಂಗ್ಸ್ ತಂಡವು ‘ವಿಶ್ವ ದಾಖಲೆ’ ಬರೆಯಿತು.

ADVERTISEMENT

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 262 ರನ್‌ಗಳ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ತಂಡವು ಪಂದ್ಯದಲ್ಲಿ ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಮುಟ್ಟಿತು. 8 ವಿಕೆಟ್‌ಗಳಿಂದ ಜಯಿಸಿತು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ದೊಡ್ಡ ಮೊತ್ತ (18.4 ಓವರ್‌ಗಳಲ್ಲಿ 2ಕ್ಕೆ262) ಇದಾಗಿದೆ. ಹೋದ ವರ್ಷದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 259 ರನ್‌ಗಳ ಗುರಿ ಬೆನ್ನಟ್ಟಿ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೂ ಇದು ದಾಖಲೆಯಾಗಿದೆ. ಇದೇ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಇದೇ ಕ್ರೀಡಾಂಗಣದಲ್ಲಿ 224 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ್ದು ದಾಖಲೆಯನ್ನೂ ಪಂಜಾಬ್ ಮೀರಿ ನಿಂತಿತು. ಒಂಬತ್ತನೇ ಪಂದ್ಯವಾಡಿದ ಪಂಜಾಬ್ ಮೂರನೇ ಜಯ ಗಳಿಸಿತು.

ಇಂಗ್ಲೆಂಡ್ ತಂಡದ ಆಟಗಾರ ಜಾನಿ ಬೆಸ್ಟೊ (ಅಜೇಯ 108; 48ಎ) ಹಾಗೂ ಪ್ರಭಸಿಮ್ರನ್ ಸಿಂಗ್ (54; 20ಎ) ಅವರಿಬ್ಬರೂ ಸೇರಿ ಪವರ್‌ ಪ್ಲೇನಲ್ಲಿಯೇ 93 ರನ್‌ ಸೂರೆ ಮಾಡಿ ಉತ್ತಮ ಆರಂಭ ನೀಡಿದರು. ಸುನಿಲ್ ನಾರಾಯಣ್ ಚುರುಕಿನ ಫೀಲ್ಡಿಂಗ್‌ನಿಂದಾಗಿ ಪ್ರಭಸಿಮ್ರನ್ ಸಿಂಗ್ ರನ್‌ಔಟ್ ಆದರು. ಆದರೆ ಜಾನಿ ಮಾತ್ರ ಗಟ್ಟಿಯಾಗಿ ಹೆಜ್ಜೆಯೂರಿದ್ದರು.

ಜಾನಿ ಅವರು ರಿಲೀ ರೂಸೊ (26; 16ಎ) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು. ಸುನಿಲ್ ಬೌಲಿಂಗ್‌ನಲ್ಲಿ ರಿಲೀ ಔಟಾದ ನಂತರ ಶಶಾಂಕ್ ಸಿಂಗ್ (ಅಜೇಯ 68) ಮಿಂಚಿದರು. ಜಾನಿ ಮತ್ತು ಶಶಾಂಕ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 16ನೇ ಓವರ್‌ನಲ್ಲಿ ಜಾನಿಗೆ ಒಂದು ಜೀವದಾನವೂ ಲಭಿಸಿತ್ತು.

ಪಂಜಾಬ್ ಇನಿಂಗ್ಸ್‌ 24 ಸಿಕ್ಸರ್‌ಗಳು ದಾಖಲಾದವು. ಈಚೆಗೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್ ತಂಡವು 22 ಸಿಕ್ಸರ್ ಹೊಡದಿದ್ದ ದಾಖಲೆಯನ್ನು ಪಂಜಾಬ್ ಮುರಿಯಿತು. ಆದೇ ಪಂದ್ಯದಲ್ಲಿ ದಾಖಲಾಗಿದ್ದ ಒಟ್ಟು 38 ಸಿಕ್ಸರ್‌ಗಳ ದಾಖಲೆಯೂ ಪತನವಾಯಿತು. ಪಂಜಾಬ್ ಮತ್ತು ಕೋಲ್ಕತ್ತ ಇನಿಂಗ್ಸ್‌ಗಳಲ್ಲಿ ಸೇರಿ 42 ಸಿಕ್ಸರ್‌ಗಳು ದಾಖಲಾದವು.

ಸಾಲ್ಟ್‌–ಸುನಿಲ್ ಶತಕದ ಜೊತೆಯಾಟ: ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಾಲ್ಟ್ (75; 37ಎ, 4X6, 6X6) ಹಾಗೂ ಸುನಿಲ್ (71; 32ಎ, 4X9, 6X4) ಮೊದಲ ವಿಕೆಟ್ ಜೊತೆಯಾಟದಲ್ಲಿ 138 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 261 ರನ್ ಗಳಿಸಿತು.

ವೇಗಿ ಹರ್ಷಲ್ ಪಟೇಲ್ ಹಾಕಿದ ಮೂರನೇ ಓವರ್‌ನಲ್ಲಿ ಹರಪ್ರೀತ್ ಬ್ರಾರ್ ಅವರು ಸುನಿಲ್ ಕ್ಯಾಚ್ ಕೈಚೆಲ್ಲಿದರು. ಆರನೇ ಓವರ್‌ನಲ್ಲಿ ಆರ್ಷದೀಪ್ ಸಿಂಗ್ ಎಸೆತವನ್ನು ಡ್ರೈವ್ ಮಾಡುವ ಯತ್ನಿಸಿದ ಸಾಲ್ಟ್‌ ಕ್ಯಾಚ್‌ ಅನ್ನು ವಶಕ್ಕೆ ಪಡೆಯುವಲ್ಲಿ ಸ್ಯಾಮ್ ಕರನ್ ವಿಫಲರಾದರು. ಇಬ್ಬರೂ ಬ್ಯಾಟರ್‌ಗಳೂ ಈ ಜೀವದಾನಗಳನ್ನು ಸಮರ್ಥವಾಗಿ ಬಳಸಿಕೊಂಡರು.

ಮೊದಲ ಹತ್ತು ಓವರ್‌ಗಳಲ್ಲಿ ಉತ್ತಮ ಮೊತ್ತ ಗಳಿಸಿದರು. 11ನೇ ಓವರ್‌ನಲ್ಲಿ ಸುನಿಲ್ ವಿಕೆಟ್ ಗಳಿಸಿದ ರಾಹುಲ್ ಚಾಹರ್ ಜೊತೆಯಾಟ ಮುರಿದರು.

ಆದರೆ 13ನೇ ಓವರ್‌ನಲ್ಲಿ ಸಾಲ್ಟ್ ಮತ್ತು 16ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್ (12 ಎಸೆಗಳಲ್ಲಿ 24) ಅವರು ಔಟಾದರು.ಆದರೆ ಕೊನೆಯ ಹಂತದ ಓವರ್‌ಗಳಲ್ಲಿ ವೆಂಕಟೇಶ್ (39; 23ಎ) ಮತ್ತು ನಾಯಕ ಶ್ರೇಯಸ್ ಅಯ್ಯರ್ (28; 10ಎ) ಸೇರಿ ವೇಗ ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.