ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, ಫೈನಲ್‌ಗೆ ಪ್ರವೇಶಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 160 ರನ್‌ಗಳ ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ಬಳಗವು 13.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಈ ಪಂದ್ಯದ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಕೆಕೆಆರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪೈಕಿ ಎರಡು ಸಲ ಟ್ರೋಫಿ ಗೆದ್ದಿದೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಫೈನಲ್‌ಗೆ ಪ್ರವೇಶಿಸಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಐಪಿಎಲ್ ಫೈನಲ್‌ಗೆ ಅತಿ ಹೆಚ್ಚು ಸಲ ಪ್ರವೇಶಿಸಿದ ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್: 10
ಮುಂಬೈ ಇಂಡಿಯನ್ಸ್: 6
ಕೋಲ್ಕತ್ತ ನೈಟ್ ರೈಡರ್ಸ್: 4
ರಾಯಲ್ ಚಾಲೆಂಜರ್ಸ್ ಬೆಂಗಳೂರು: 3
ಕೆಕೆಆರ್ ಫೈನಲ್ ಪ್ರವೇಶ: 2012, 2014, 2021, 2024
ಇಲ್ಲಿ ಸೋತ ಪ್ಯಾಟ್ ಕಮಿನ್ಸ್ ಬಳಗಕ್ಕೆ ಫೈನಲ್ ಪ್ರವೇಶಿಸಲು ಇನ್ನೂ ಒಂದು ಅವಕಾಶವಿದೆ. ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಜಯಿಸಿದ ತಂಡವನ್ನು ಎದುರಿಸಲಿದೆ. ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಲಿವೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಇಬ್ಬರು ಪ್ರಮುಖ ಆಟಗಾರರ ಮಧ್ಯೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ಆದರೆ ಮೊದಲ ಓವರ್‌ನಲ್ಲೇ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್, ಮಹತ್ವದ ಪಂದ್ಯದಲ್ಲಿ ಮಗದೊಮ್ಮೆ ಛಾಪು ಮೂಡಿಸಿದರು. ಅಲ್ಲದೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮತ್ತೊಂದೆಡೆ ಟೂರ್ನಿಯುದ್ಧಕ್ಕೂ ಸ್ಫೋಟಕ ಆಟವಾಡುತ್ತಿದ್ದ ಹೈದರಾಬಾದ್‌ನ ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ (3) ವೈಫಲ್ಯವನ್ನು ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲೂ ನಿತೀಶ್ ರೆಡ್ಡಿ (9) ಹಾಗೂ ಶಾಬಾಜ್ ಅಹ್ಮದ್ (0), ಅಬ್ದುಲ್ ಸಮದ್ (16) ಹಾಗೂ 'ಇಂಪ್ಯಾಕ್ಟ್ ಪ್ಲೇಯರ್' ಸನ್‌ವೀರ್ ಸಿಂಗ್‌ಗೆ ನಿರೀಕ್ಷೆ ಮುಟ್ಟುವಲ್ಲಿ ಸಾಧ್ಯವಾಗಲಿಲ್ಲ.
ರಾಹುಲ್ ತ್ರಿಪಾಠಿ (55), ಹೆನ್ರಿಚ್ ಕ್ಲಾಸೆನ್ (32), ನಾಯಕ ಪ್ಯಾಟ್ ಕಮಿನ್ಸ್ (30) ಉಪಯುಕ್ತ ಆಟದಿಂದ ಗೌರವಯುತ ಮೊತ್ತ ಪೇರಿಸಲು ಸಾಧ್ಯವಾಯಿತು. ಕೆಕೆಆರ್ ಪರ ಬೌಲರ್‌ಗಳು ಸಾಂಘಿಕ ದಾಳಿ ಕಟ್ಟಿದರು. ಸ್ಟಾರ್ಕ್ ಮೂರು, ವರುಣ್ ಚಕ್ರವರ್ತಿ ಎರಡು ಮತ್ತು ವೈಭವ್ ಅರೋರಾ, ಹರ್ಷಿತ್ ರಾಣಾ, ಸುನಿಲ್ ನಾರಾಯಣ್ ಹಾಗೂ ಆ್ಯಂಡ್ರೆ ರಸೆಲ್ ತಲಾ ಒಂದು ವಿಕೆಟ್ ಗಳಿಸಿದರು.
ಕೆಕೆಆರ್‌ಗೆ ಸುಲಭ ಜಯ, ಅಯ್ಯರ್ ದ್ವಯರ ಫಿಫ್ಟಿ ಸಾಧನೆ...
ಇನ್ನೂ 38 ಎಸೆತಗಳು ಬಾಕಿ ಉಳಿದಿರುವಂತೆಯೇ ಕೆಕೆಆರ್ ಗೆಲುವಿನ ಗುರಿ ಮುಟ್ಟಿತು. ನಾಯಕ ಶ್ರೇಯಸ್ ಅಯ್ಯರ್ (58*) ಹಾಗೂ ವೆಂಕಟೇಶ್ ಅಯ್ಯರ್ (51*) ಅರ್ಧಶತಕಗಳ ಸಾಧನೆ ಮಾಡಿದರೆ ರೆಹಮನುಲ್ಲಾ ಗುರ್ಬಾಜ್ (23) ಹಾಗೂ ಸುನಿಲ್ ನಾರಾಯಣ್ (21) ಉಪಯುಕ್ತ ಕಾಣಿಕೆ ನೀಡಿದರು.
ನಾಯಕನಾಗಿ ಪ್ಲೇ-ಆಫ್‌ನಲ್ಲಿ 2ನೇ ಫಿಫ್ಟಿ ಸಾಧನೆ...
ಇದರೊಂದಿಗೆ ಶ್ರೇಯಸ್ ಅಯ್ಯರ್ ಪ್ಲೇ-ಆಫ್‌ನಲ್ಲಿ ನಾಯಕನಾಗಿ ಎರಡನೇ ಸಲ ಫಿಫ್ಟಿ ಸಾಧನೆ ಮಾಡಿದರು. ಆ ಮೂಲಕ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ತೊಂದೆಡೆ ವೆಂಕಟೇಶ್ ಅಯ್ಯರ್ ಪ್ಲೇ-ಆಫ್‌ನಲ್ಲಿ ಮೂರನೇ ಸಲ ಅರ್ಧಶತಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.