ಮುಂಬೈ: ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (33ಕ್ಕೆ4) ಕೊನೆಗೂ ನಿರ್ಣಾಯಕ ಸಂದರ್ಭದಲ್ಲಿ ಲಯಕ್ಕೆ ಮರಳಿ ನಾಲ್ಕು ವಿಕೆಟ್ ಪಡೆದರು. ಇದರಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 24 ರನ್‌ಗಳಿಂದ ಸೋಲಿಸಿ ಪ್ಲೇ ಆಫ್ ಅವಕಾಶವನ್ನು ಉಜ್ವಲಗೊಳಿಸಿತು.
ಐದು ಬಾರಿಯ ಚಾಂಪಿಯನ್ ಮುಂಬೈಗೆ ಇದು ಎಂಟನೇ ಸೋಲಾಗಿದ್ದು, ಪ್ಲೇ ಆಫ್ ಅವಕಾಶವನ್ನು ಮುಚ್ಚಿತು. ಕೋಲ್ಕತ್ತ ತಂಡ 12 ವರ್ಷಗಳಲ್ಲಿ ಮೊದಲ ಬಾರಿ ಮುಂಬೈ ತಂಡವನ್ನು ಅದರದೇ ತವರಿನಲ್ಲಿ ಸೋಲಿಸುವಲ್ಲಿ ಯಶಸ್ವಿ ಆಯಿತು.
ಮೊದಲು ಆಡಿದ ಕೋಲ್ಕತ್ತ ನೈಟ್ ರೈಡರ್ಸ್ ಒಂದು ಎಸೆತ ಉಳಿದಿರುವಂತೆ 169 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಮುಂಬೈ ಏಳು ಎಸೆತಗಳಿರುವಂತೆ 145 ರನ್‌ಗಳಿಗೆ ಆಟ ಮುಗಿಸಿತು.
ಮುಂಬೈಗೆ ಕೊನೆಯ ಐದು ಓವರುಗಳಲ್ಲಿ 51 ರನ್‌ಗಳು ಬೇಕಿದ್ದವು. ಸೂರ್ಯಕುಮಾರ್ ಯಾದವ್ 56 ರನ್ (35 ಎಸೆತ, 4x6, 6x2) ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ ರಸೆಲ್ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಸೂರ್ಯಕುಮಾರ್ ವಿಕೆಟ್ ಪಡೆದು ಹೊಡೆತ ನೀಡಿದರು.
ಐಪಿಎಲ್‌ನ ಅತಿ ದುಬಾರಿ ಆಟಗಾರ ಸ್ಟಾರ್ಕ್ ಈ ಹಿಂದಿನ ಪಂದ್ಯಗಳಲ್ಲಿ ಗಮನ ಸೆಳೆದಿರಲಿಲ್ಲ. ಆದರೆ ಇಲ್ಲಿ ಮಿಂಚಿದರು. 17ನೇ ಓವರ್‌ನಲ್ಲಿ ಬರೇ ಮೂರು ರನ್ ನೀಡಿದ ಅವರು 19ನೇ ಓವರ್‌ನಲ್ಲಿ ಟಿಮ್ ಡೇವಿಡ್ (24) ಅವರನ್ನೂ ಸೇರಿದಂತೆ ಮೂರು ವಿಕೆಟ್ ಪಡೆದರು. ಆ ಓವರ್‌ನ ಮೊದಲ ಎಸೆತವನ್ನು ಡೇವಿಡ್ ಸಿಕ್ಸರ್‌ಗೆ ಎತ್ತಿದರು. ಆದರೆ ಮರುಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಯತ್ನಿಸಿ ನಿರ್ಗಮಿಸಿದರು. ಪೀಯೂಷ್ ಚಾವ್ಲಾ ಬಂದ ಹಾಗೆಯೇ ಹೋದರು. ಸ್ಟಾರ್ಕ್‌ಗೆ ಹ್ಯಾಟ್ರಿಕ್ ತಪ್ಪಿದರೂ ಐದನೇ ಎಸೆತದಲ್ಲಿ ಯಾರ್ಕರ್‌ಗೆ ಕೋಝಿ ಅವರು ಮಿಡ್ಲ್ ಸ್ಟಂಪ್ ಕಳೆದುಕೊಂಡರು. ಸ್ಟಾರ್ಕ್ ಇದಕ್ಕೆ ಮೊದಲು ಇಶಾನ್ ಕಿಶನ್ ವಿಕೆಟ್ ಕೂಡ ಗಳಿಸಿದ್ದರು.
ಇದಕ್ಕೆ ಮೊದಲು ಜಸ್‌ಪ್ರೀತ್ ಬೂಮ್ರಾ (18ಕ್ಕೆ3) ಮತ್ತು ನುವಾನ್ ತುಷಾರ (42ಕ್ಕೆ3) ಅವರ ದಾಳಿಯ ಮುಂದೆ ಕೋಲ್ಕತ್ತ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ನುವಾನ್ ತುಷಾರ ಆರಂಭದಲ್ಲಿ ಫಿಲ್ ಸಾಲ್ಟ್ (5), ಅಂಗಕ್ರಿಷ್ ರಘುವಂಶಿ (13) ಹಾಗೂ ನಾಯಕ ಶ್ರೇಯಸ್ ಅಯ್ಯರ್ (6 ರನ್) ಅವರ ವಿಕೆಟ್ ಪಡೆದು ಪೆಟ್ಟು ನೀಡಿದರು. ಹಾರ್ದಿಕ್ ಪಾಂಡ್ಯ ಅವರೂ ಸುನಿಲ್ ನಾರಾಯಣ್ ಅವರಿಗೆ ಡಗ್‌ಔಟ್ ದಾರಿ ತೋರಿಸಿದರು.
ತಂಡ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕುಸಿತದ ಹಾದಿಯಲ್ಲಿತ್ತು. ಈ ಹಂತದಲ್ಲಿ ವೆಂಕಟೇಶ್ ಅಯ್ಯರ್ (70; 52ಎ, 4X6, 6X3) ಮತ್ತು ಕರ್ನಾಟಕದ ಮನೀಷ್ ಪಾಂಡೆ (42; 31ಎ, 4X2, 6X2) ಬಲ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್: 19.5 ಓವರ್‌ಗಳಲ್ಲಿ 169 (ವೆಂಕಟೇಶ್ ಅಯ್ಯರ್ 70, ಮನೀಷ್ ಪಾಂಡೆ 42, ನುವಾನ್ ತುಷಾರ 42ಕ್ಕೆ3, ಜಸ್‌ಪ್ರೀತ್ ಬೂಮ್ರಾ 18ಕ್ಕೆ3, ಹಾರ್ದಿಕ್ ಪಾಂಡ್ಯ 44ಕ್ಕೆ2, ಪಿಯೂಷ್ ಚಾವ್ಲಾ 15ಕ್ಕೆ1) ಮುಂಬೈ ಇಂಡಿಯನ್ಸ್: 18.5 ಓವರ್‌ಗಳಲ್ಲಿ 145 (ಸೂರ್ಯಕುಮಾರ್ ಯಾದವ್ 56, ಟಿಮ್ ಡೇವಿಡ್ 24, ಇಶಾನ್ ಕಿಶಾನ್ 13, ಮಿಚೆಲ್ ಸ್ಟಾರ್ಕ್ 33ಕ್ಕೆ4, ವರುಣ್ ಚಕ್ರವರ್ತಿ 22ಕ್ಕೆ2, ಸುನಿಲ್ ನಾರಾಯಣ್ 22ಕ್ಕೆ2). ಪಂದ್ಯ ಶ್ರೇಷ್ಠ: ವೆಂಕಟೇಶ್ ಅಯ್ಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.