ಬೆಂಗಳೂರು: ‘ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ಫೀಲ್ಡಿಂಗ್ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಹೆಬ್ಬೆರಳಿಗೆ ಆದ ಗಾಯ ಗಂಭೀರ ಸ್ವರೂಪದ್ದಲ್ಲ. ಈ ಬಗ್ಗೆ ಕಳವಳಪಡುವಂಥದ್ದೇನೂ ಇಲ್ಲ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಹೇಳಿದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಪೂರ್ವಭಾವಿಯಾಗಿ ಅವರು ಮಾತನಾಡಿದರು. ‘ಮ್ಯಾಕ್ಸಿ ಅವರಿಗೆ ಕೆಲವು ಸ್ಕ್ಯಾನ್ ನಡೆಸಲಾಗಿದೆ. ಈಗ ಸಮಸ್ಯೆ ಕಾಣುತ್ತಿಲ್ಲ. ಅವರು ನೆಟ್ ಪ್ರಾಕ್ಟೀಸ್‌ನಲ್ಲೂ ತೊಡಗಲಿದ್ದಾರೆ’ ಎಂದರು. ಬೊಬಾಟ್ ಹೇಳಿದಂತೆ ಮ್ಯಾಕ್ಸ್‌ವೆಲ್ ಚಿನ್ನಸ್ವಾಮಿ ಕ್ರೀಡಾಂಗಣದ ನೆಟ್ ಪ್ರಾಕ್ಟೀಸ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಈ ಬಾರಿಯ ಲೀಗ್‌ನಲ್ಲಿ ಮ್ಯಾಕ್ಸ್‌ವೆಲ್ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಇನ್ನೂ ಒಂದೆರಡು ಪ್ರಶ್ನೆಗಳು ಆಸ್ಟ್ರೇಲಿಯಾದ ಆಟಗಾರನಿಗೆ ಸಂಬಂಧಿಸಿದ್ದವು. 6 ಪಂದ್ಯಗಳಿಂದ 32 ರನ್ ಗಳಿಸಿರುವ ‘ಮ್ಯಾಕ್ಸಿ’ ಅವರು ಬೇಗ ಲಯ ಕಂಡುಕೊಳ್ಳುವ ವಿಶ್ವಾಸವನ್ನು ಬೊಬಾಟ್ ವ್ಯಕ್ತಪಡಿಸಿದರು.
‘ಸಹಜವಾಗಿ ಅವರಿಗೂ (ಮ್ಯಾಕ್ಸ್‌ವೆಲ್) ನಿರಾಸೆಯಾಗಿದೆ. ಒಂದೆರಡು ವರ್ಷಗಳಿಂದ ಅವರು ಅಮೋಘ ಲಯದಲ್ಲಿದ್ದರು. ನಮ್ಮ ಕಾರ್ಯತಂತ್ರದಲ್ಲಿದ್ದ ಅವರು, ತಂಡದ ಬ್ಯಾಟಿಂಗ್ ಸರದಿಯ ಮುಖ್ಯ ಭಾಗವಾಗಿದ್ದರು. ನಾವು ಸಾಧ್ಯವಾದಷ್ಟು ಅವರ ಬೆನ್ನಿಗೆ ನಿಂತಿದ್ದು, ಲಯ ಕಂಡುಕೊಳ್ಳಲು ನಮ್ಮಿಂದಾದಷ್ಟು ನೆರವು ನೀಡುತ್ತೇವೆ’ ಎಂದರು.
ಸ್ಪಿನ್ನರ್‌ಗಳೆದುರು ಉತ್ತಮ ದಾಖಲೆಯಿರುವ ಅವರ ಫಾರ್ಮ್, ಮಧ್ಯಮ ಹಂತದ ಓವರುಗಳಲ್ಲಿ ನಮಗೆ ಮಹತ್ವದ್ದಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.