ಬೆಂಗಳೂರು: ನಿಧಾನಗತಿಯ ಸ್ಟ್ರೈಕ್‌ರೇಟ್‌ಗೆ ಸಂಬಂಧಿಸಿದಂತೆ ಟೀಕಾಕಾರರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಗದೊಮ್ಮೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
'ಪ್ರದರ್ಶನವೇ ನನ್ನ ಏಕೈಕ ಕರೆನ್ಸಿಯಾಗಿದ್ದು, ತನ್ನ ಸಾಮರ್ಥ್ಯದ ಬಗ್ಗೆ ಯಾರಿಂದಲೂ ಅನುಮೋದನೆ ಅಥವಾ ಭರವಸೆ ಪಡೆಯುವ ಅಗತ್ಯವಿಲ್ಲ. ಮೈದಾನದಲ್ಲಿ ನಾನು ಏನು ಮಾಡಬಲ್ಲೆ ಎಂಬುದರ ಬಗ್ಗೆ ಅರಿವು ನನಗಿದೆ' ಎಂದು ಹೇಳಿದ್ದಾರೆ.
ಈ ಮೊದಲು ವಿರಾಟ್ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಟೀಕೆ ಮಾಡಿದ್ದರು. ಇತ್ತೀಚೆಗಿನ ವಿಡಿಯೊದಲ್ಲಿ ಕೊಹ್ಲಿ ಈ ಕುರಿತು ಮಾತನಾಡಿದ್ದಾರೆ.
'ನಾನು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಮೈದಾನದಲ್ಲಿ ನಾನು ಏನು ಮಾಡಬಲ್ಲೆ ಎಂಬುದರ ಬಗ್ಗೆ ಅರಿವಿದೆ. ನಾನು ಎಂತಹ ಆಟಗಾರ ಅಥವಾ ನನ್ನ ಸಾಮರ್ಥ್ಯ ಏನು ಎಂಬುದರ ಬಗ್ಗೆ ಯಾರಿಗೂ ಹೇಳಬೇಕಾದ ಅಗತ್ಯವಿಲ್ಲ' ಎಂದು ಕೊಹ್ಲಿ ಹೇಳಿದ್ದಾರೆ.
'ಪಂದ್ಯ ಗೆಲ್ಲುವುದು ಹೇಗೆ ಎಂದು ನಾನು ಯಾರನ್ನೂ ಕೇಳಿ ತಿಳಿದುಕೊಂಡಿಲ್ಲ. ಮೈದಾನದಲ್ಲಿನ ಅನುಭವ ಹಾಗೂ ವೈಫಲ್ಯದಿಂದ ನಾನು ಅದನ್ನು ಕಲಿತಿದ್ದೇನೆ' ಎಂದು ಹೇಳಿದ್ದಾರೆ.
'ನೀವು ತಂಡಕ್ಕಾಗಿ ಪದೇ ಪದೇ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿರುವಾಗ ಅದು ಆಕಸ್ಮಿಕ ವಿಚಾರವಲ್ಲ. ಮೈದಾನಕ್ಕಿಳಿದು ಆಡುವುದು ಮತ್ತು ಅದರ ಬಗ್ಗೆ ಮತ್ತೊಬ್ಬರು ವಿಶ್ಲೇಷಣೆ ಮಾಡುವುದು ಎರಡು ವಿಭಿನ್ನ ವಿಷಯಗಳಾಗಿವೆ' ಎಂದು ಅವರು ಹೇಳಿದ್ದಾರೆ.
'ನನ್ನ ಬಗ್ಗೆ ಇಂತಹ ವಿಷಯಗಳನ್ನು ಹೇಳಬೇಡಿ ಎಂದು ಯಾರಿಗಾದರೂ ಹೇಳಬೇಕು ಎಂದು ನನಗೆ ಎಂದಿಗೂ ಅನಿಸಿಲ್ಲ. ನಾನು ಏನು ಮಾಡಬಲ್ಲೆ ಎಂಬುದು ತಿಳಿದಿದೆ. ನನಗೆ ಯಾರ ಅನುಮೋದನೆ ಅಥವಾ ಆಶ್ವಾಸನೆ ಬೇಕಿಲ್ಲ. ನಾನಿದನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕಲಿತಿದ್ದೇನೆ. ಇತರ ವಿಧಾನದ ಮೂಲಕ ಬಹಳ ಬೇಗನೇ ರಾಜ್ಯ ತಂಡದ ಪರ ಆಡಬಹುದಿತ್ತು. ಆದರೆ ನಾನು ಸಮರ್ಥನಾಗಿದ್ದರೆ ಮಾತ್ರ ಅದನ್ನು ಸಾಧಿಸುತ್ತೇನೆ ಎಂದು ಅವರು ಹೇಳಿಕೊಟ್ಟಿದ್ದರು. ಪ್ರದರ್ಶನವೇ ನನ್ನ ಏಕೈಕೆ ಕರೆನ್ಸಿಯಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.