ಚಂಡೀಗಡ: ದೀರ್ಘ ಸಮಯದ ನಂತರ ಕ್ರಿಕೆಟ್ ಅಂಗಳಕ್ಕೆ ಮರಳಿದ ರಿಷಭ್ ಪಂತ್ ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಿದರು. ನಾಯಕರಾಗಿ ತಂಡವನ್ನೂ ಮುನ್ನಡೆಸಿದರು. ಆದರೆ ಗೆಲುವು ಮಾತ್ರ ಒಲಿಯಲಿಲ್ಲ.
ಮುಲ್ಲನಪುರದಲ್ಲಿರುವ ಎಂ.ವೈ.ಎಸ್.ಐ.ಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಿಷಭ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ತಂಡವು 4 ವಿಕೆಟ್‌ಗಳಿಂದ ಮಣಿಸಿತು. ಆಲ್‌ರೌಂಡರ್ ಸ್ಯಾಮ್ ಕರನ್ (63; 47ಎ, 4X6, 6X1) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (ಅಜೇಯ 38; 21ಎ, 4X2, 6X3) ಅವರ ಸ್ಪೋಟಕ ಶೈಲಿಯ ಬ್ಯಾಟಿಂಗ್‌ನಿಂದ ಕಿಂಗ್ಸ್ ಜಯಿಸಿತು.
ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ತಂಡದ ಶಾಯ್ ಹೋಪ್ (33; 25ಎ, 4X2, 6X2) ಹಾಗೂ ಅಭಿಷೇಕ್ ಪೊರೆಲ್ (ಅಜೇಯ 32, 10ಎ, 4X4, 6X2) ಅವರ ಆಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 174 ರನ್ ಗಳಿಸಿತು. ಪಂಜಾಬ್ ತಂಡದ ಆರ್ಷದೀಪ್ ಸಿಂಗ್ (28ಕ್ಕೆ2) ಮತ್ತು ಹರ್ಷಲ್ ಪಟೇಲ್ (47ಕ್ಕೆ2) ಉತ್ತಮ ದಾಳಿ ನಡೆಸಿದರು.
ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. ಇನಿಂಗ್ಸ್‌ನಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇದ್ದಾಗಲೇ ತಂಡ ಗೆಲುವಿನ ಗುರಿ ಮುಟ್ಟಿತು. ಆದರೆ ಇದಕ್ಕೂ ಮುನ್ನ ತುಸು ಆತಂಕ ಎದುರಿಸಿತ್ತು. ಗೆಲುವಿಗೆ ಎಂಟು ರನ್‌ಗಳ ಅಗತ್ಯವಿದ್ದಾಗಲೇ ಡೆಲ್ಲಿಯ ಎಡಗೈ ವೇಗಿ ಖಲೀಲ್ ಅಹಮದ್ 19ನೇ ಓವರ್‌ನಲ್ಲಿ ಸ್ಯಾಮ್ ಕರನ್ ಮತ್ತು ಶಶಾಂಕ್ ಸಿಂಗ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಕೇವಲ ನಾಲ್ಕು ರನ್ ಮಾತ್ರ ನೀಡಿದರು.
ಇದರಿಂದಾಗಿ ಕೊನೆಯ ಓವರ್ ರೋಚಕತೆ ಕೆರಳಿಸಿತ್ತು. ಆ ಓವರ್ ಬೌಲಿಂಗ್ ಮಾಡಿದ ಸುಮಿತ್ ಕುಮಾರ್ ಮೊದಲೆರಡು ವೈಡ್ ಹಾಕಿದರು. ನಂತದ ಎಸೆತವನ್ನು ಡಾಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಎಸೆತವನ್ನು ಲಿವಿಂಗ್‌ಸ್ಟೋನ್ ಸಿಕ್ಸರ್‌ಗೆತ್ತುವ ಮೂಲಕ ತಂಡಕ್ಕೆ ಗೆಲುವಿನ ಗಡಿ ದಾಟಿಸಿದರು. ಡಗ್‌ಔಟ್‌ನಲ್ಲಿದ್ದ ತಂಡದ ಸಹಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಂಭ್ರಮಿಸಿದರು.
ಗಮನ ಸೆಳೆದ ಪಂತ್
14 ತಿಂಗಳುಗಳ ನಂತರ ಕ್ರಿಕೆಟ್‌ಗೆ ಮರಳಿದ ರಿಷಭ್ ಪಂತ್ ಅವರು ಗಮನ ಸೆಳೆದರು.
ಬ್ಯಾಟಿಂಗ್, ವಿಕೆಟ್‌ಕೀಪಿಂಗ್ ಮತ್ತು ನಾಯಕತ್ವವನ್ನು ನಿಭಾಯಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಂತ್ 13 ಎಸೆತಗಳಲ್ಲಿ 18 ರನ್ ಗಳಿಸಿದರು. ಅದರಲ್ಲಿ ಎರಡು ಚೆಂದದ ಬೌಂಡರಿಗಳಿದ್ದವು.
12ನೇ ಓವರ್‌ನಲ್ಲಿ ರಾಹುಲ್ ಚಾಹರ್ ಎಸೆತವನ್ನು ಎತ್ತರಕ್ಕೆ ಹೊಡೆದ ಅವರ ಕ್ಯಾಚ್ ಪಡೆಯುವಲ್ಲಿ ಫೀಲ್ಡರ್ ಹರ್ಷಲ್ ಪಟೇಲ್ ವಿಫಲರಾದರು.
ಆದರೆ ನಂತರದ ಓವರ್‌ನಲ್ಲಿಯೇ ಅವರು ಹರ್ಷಲ್ ಎಸೆತವನ್ನು ಆಡಿ ಜಾನಿ ಬೆಸ್ಟೊಗೆ ಕ್ಯಾಚಿತ್ತರು. ಕಿಂಪಿಂಗ್‌ನಲ್ಲಿಯೂ ಕೆಲವು ಉತ್ತಮ ಕೌಶಲಗಳನ್ನು ತೋರಿದರು. ಅವರು ಜಿತೇಶ್ ಶರ್ಮಾ ಅವರನ್ನು ಚುರುಕಾಗಿ ಸ್ಟಂಪಿಂಗ್ ಮಾಡಿದರು. ಅಲ್ಲದೇ ಶಶಾಂಕ್ ಸಿಂಗ್ ಅವರ ಕ್ಯಾಚ್ ಕೂಡ ಪಡೆದರು.
2022ರ ಡಿಸೆಂಬರ್‌ನಲ್ಲಿ ಅವರು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ, ಆರೈಕೆಗಾಗಿ ದೀರ್ಘ ಅವಧಿ ಕ್ರಿಕೆಟ್‌ನಿಂದ ದೂರವಿದ್ದರು.
‘ಬ್ಯಾಟಿಂಗ್ ಮಾಡುವಾಗ ಸ್ವಲ್ಪ ಒತ್ತಡದಲ್ಲಿದ್ದೆ. ಬಹಳ ದಿನಗಳ ನಂತರ ಕ್ರೀಡಾಂಗಣ ಪ್ರವೇಶಿಸಿದಾಗ ಇಂತಹ ಸ್ಥಿತಿಯನ್ನು ಅನುಭವಿಸುವುದು ಅನಿವಾರ್ಯ. ಇದೇನೂ ನನಗೆ ಹೊಸದಲ್ಲ. ಆದರೆ ಕಣಕ್ಕೆ ಮರಳಿರುವುದು ಸಂತಸವಾಗಿದೆ’ ಎಂದು ಪಂತ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್: 9 ವಿಕೆಟ್‌ಗೆ 174 (20 ಓವರುಗಳಲ್ಲಿ)
ವಾರ್ನರ್ ಸಿ ಶರ್ಮಾ ಬಿ ಪಟೇಲ್ 29 (21ಎ, 4x3, 6x2)
ಮಾರ್ಷ್ ಸಿ ಚಾಹರ್ ಬಿ ಅರ್ಷದೀಪ್ 20 (12ಎ, 4x2, 6x2)
ಹೋಪ್ ಸಿ ಬ್ರಾರ್ ಬಿ ರಬಾಡ 33 (25ಎ, 4x2, 6x2)
ಪಂತ್ ಸಿ ಬೇಸ್ಟೊ ಬಿ ಪಟೇಲ್ 18 (13ಎ, 4x2)
ಭುಯಿ ಸಿ ಶರ್ಮಾ ಇ ಬ್ರಾರ್ 3 (7ಎ)
ಸ್ಟಬ್ಸ್ ಸಿ ಶಶಾಂಕ್ ಬಿ ಚಾಹರ್ 5 (8ಎ)
ಅಕ್ಷರ್ ರನೌಟ್ (ತ್ಯಾಗರಾಜನ್/ ಶರ್ಮಾ) 21 (13ಎ, 4x2, 6x1)
ಸುಮಿತ್ ಸಿ ಶರ್ಮಾ ಬಿ ಅರ್ಷದೀಪ್ 2 (9ಎ)
ಅಭಿಷೇಕ್ ಔಟಾಗದೇ 32 (10ಎ, 4x4, 6x2)
ಕುಲದೀಪ್ ರನೌಟ್ (ಶಶಾಂಕ್/ ಪಟೇಲ್) 1 (2ಎ)
ಇತರೆ: 10 (ಲೆಗ್‌ಬೈ 6, ವೈಡ್ 4)
ವಿಕೆಟ್ ಪತನ: 1–39 (ಮಿಚೆಲ್ ಮಾರ್ಷ್, 3.2), 2–74 (ಡೇವಿಡ್ ವಾರ್ನರ್, 7.6), 3–94 (ಶಾಯ ಹೋಪ್, 10.4), 5–111 (ರಿಷಭ್ ಪಂತ್, 12.4), 5–111 (ರಿಕಿ ಭುಯಿ, 13.2), 6–128 (ಟ್ರಿಸ್ಟನ್ ಸ್ಟಬ್ಸ್, 15.4), 7–138 (ಅಕ್ಷರ್ ಪಟೇಲ್, 17.1), 8–147 (ಸುಮಿತ್ ಕುಮಾರ್, 18.3), 9–174 (ಕುಲದೀಪ್ ಯಾದವ್, 19.6).
ಬೌಲಿಂಗ್: ಸ್ಯಾಮ್ ಕರನ್ 1–0–10–0; ಅರ್ಷದೀಪ್ ಸಿಂಗ್ 4–0–28–2; ಕಗಿಸೊ ರಬಾಡ 4–0–36–1; ಹರ್‌ಪ್ರೀತ್ ಬ್ರಾರ್ 3–0–14–1; ರಾಹುಲ್ ಚಾಹರ್ 4–0–33–1; ಹರ್ಷಲ್ ಪಟೇಲ್ 4–0–47–2.
ಪಂಜಾಬ್ ಕಿಂಗ್ಸ್: 6 ವಿಕೆಟ್‌ಗೆ 177 (19.2 ಓವರುಗಳಲ್ಲಿ)
ಧವನ್ ಬಿ ಶರ್ಮಾ 22 (16ಎ, 4x4)
ಬೇಸ್ಟೊ ರನೌಟ್ (ಶರ್ಮಾ) 9 (3ಎ, 4x2)
ಪ್ರಭಸಿಮ್ರನ್ ಸಿ ವಾರ್ನರ್ ಬಿ ಕುಲದೀಪ್ 27 (17ಎ, 4x5)
ಕರನ್ ಬಿ ಅಹ್ಮದ್ 63 (47ಎ, 4x6, 6x1)
ಜಿತೇಶ್ ಸ್ಟಂ ಪಂತ್ ಬಿ ಕುಲದೀಪ್ 9 (9ಎ, 4x1)
ಲಿವಿಂಗ್‌ಸ್ಟೋನ್ ಔಟಾಗದೇ 38 (21ಎ, 4x2, 6x3)
ಶಶಾಂಕ್ ಸಿ ಪಂತ್ ಬಿ ಅಹ್ಮದ್ 0 (1ಎ)
ಹರ್‌ಪ್ರೀತ್ ಔಟಾಗದೇ 2 (2ಎ)
ಇತರೆ: 8 (ಲೆಗ್‌ಬೈ 2, ವೈಡ್ 6)
ವಿಕೆಟ್ ಪತನ: 1–34 (ಶಿಖರ್ ಧವನ್, 3.1), 2–42 (ಜಾನಿ ಬೇಸ್ಟೊ, 3.4), 3–84 (ಪ್ರಭಸಿಮ್ರನ್ ಸಿಂಗ್, 9.2), 4–100 (ಜಿತೇಶ್ ಶರ್ಮಾ, 11.3), 5–167 (ಸ್ಯಾಮ್ ಕರನ್, 18.3), 6–167 (ಶಶಾಂಕ್ ಸಿಂಗ್, 18.4).
ಬೌಲಿಂಗ್: ಖಲೀಲ್ ಅಹ್ಮದ್ 4–0–43–2; ಇಶಾಂತ್ ಶರ್ಮಾ 2–0–16–0; ಮಿಚೆಲ್ ಮಾರ್ಷ್ 4–0–52–0; ಅಕ್ಷರ್ ಪಟೇಲ್ 4–0–25–0; ಕುಲದೀಪ್ ಯಾದವ್ 4–0–20–2; ಸುಮಿತ್ ಕುಮಾರ್ 1.2–0–19–0.
ಪಂದ್ಯದ ಆಟಗಾರ: ಸ್ಯಾಮ್ ಕರನ್
ಮಿಂಚಿದ ಇಶಾಂತ್
ಪಂಜಾಬ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವಿದರು. ಆಟಕ್ಕೆ ಕುದುರಿಕೊಂಡಿದ್ದ ನಾಯಕ ಶಿಖರ್ ಧವನ್ (22; 16ಎ) ಅವರನ್ನು ವೇಗಿ ಇಶಾಂತ್ ಶರ್ಮಾ ಕ್ಲೀನ್‌ಬೌಲ್ಡ್ ಮಾಡಿದರು.
ಅದೇ ಓವರ್‌ನಲ್ಲಿ ಜಾನಿ ಬೆಸ್ಟೊ ಅವರನ್ನು ರನ್‌ಔಟ್ ಮಾಡುವಲ್ಲಿಯೂ ಇಶಾಂತ್ ಚುರುಕುತನ ತೋರಿದರು. ಪ್ರಭಸಿಮ್ರನ್ ಸಿಂಗ್ (26; 17ಎ) ಉತ್ತಮವಾಗಿ ಆಡುತ್ತಿದ್ದ ಸಂದರ್ಭದಲ್ಲಿ ಕುಲದೀಪ್ ಯಾದವ್ ಸ್ಪಿನ್ ಎಸೆತದಲ್ಲಿ ಔಟಾದರು. ಜಿತೇಶ್ ಶರ್ಮಾ (9 ರನ್) ವಿಕೆಟ್ ಕೂಡ ಕುಲದೀಪ್ ವಶವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.