ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲು ಕಂಡಿದೆ.
ಜೈಪುರದಲ್ಲಿ ರಾಜಸ್ಥಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 197 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್, ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಹೀರೊದಿಂದ ವಿಲನ್ ಆದ ಸೆನ್...
ಮೊದಲ ಮೂರು ಓವರ್‌ಗಳಲ್ಲಿ ನಿಖರ ದಾಳಿ ಸಂಘಟಿಸಿದ ರಾಜಸ್ಥಾನದ ವೇಗದ ಬೌಲರ್ ಕುಲದೀಪ್ ಸೆನ್, ತಮ್ಮ ಅಂತಿಮ ಓವರ್‌ನಲ್ಲಿ 20 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಎನಿಸಿದರು. ಆ ಮೂಲಕ ಹೀರೊದಿಂದ ವಿಲನ್ ಆದರು. ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಿದ ಸೆನ್, ಸಾಯಿ ಸುದರ್ಶನ್ (35), ಮ್ಯಾಥ್ಯೂ ವೇಡ್ (4) ಹಾಗೂ ಅಭಿನವ್ ಮನೋಹರ್ (1) ವಿಕೆಟ್‌ಗಳನ್ನು ಗಳಿಸಿದರು. ಆದರೂ ಅಂತಿಮವಾಗಿ ನಾಲ್ಕು ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟರು.
ಮತ್ತೊಂದೆಡೆ ಟ್ರೆಂಟ್ ಬೌಲ್ಟ್‌ಗೆ ಕೇವಲ ಎರಡು ಓವರ್ ಮಾತ್ರ ನೀಡಿರುವುದು ನಾಯಕ ಸಂಜು ಸ್ಯಾಮ್ಸನ್ ಟೀಕೆಗೆ ಗುರಿಯಾಗಿದ್ದಾರೆ.
ನಾಯಕನ ಆಟವಾಡಿದ ಗಿಲ್...
ನಾಯಕನ ಆಟವಾಡಿದ ಶುಭಮನ್ ಗಿಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 44 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು. ಅಲ್ಲದೆ ಐಪಿಎಲ್‌ನಲ್ಲಿ 3,000 ರನ್ ಕ್ಲಬ್ ಸೇರಿದರು.
ರಶೀದ್ ಆಲ್‌ರೌಂಡ್ ಆಟ...
ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ರಶೀದ್ ಖಾನ್, ರಾಜಸ್ಥಾನಕ್ಕೆ ಬಲವಾದ ಪೆಟ್ಟು ನೀಡಿದರು. ಮೊದಲು ನಾಲ್ಕು ಓವರ್‌ನಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟಿದ್ದ ರಶೀದ್, ಜೋಸ್ ಬಟ್ಲರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬಳಿಕ ನಿರ್ಣಾಯಕ ಹಂತದಲ್ಲಿ ಬ್ಯಾಟ್ ಬೀಸಿದ ರಶೀದ್, ಕೇವಲ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ (4 ಬೌಂಡರಿ) ತಂಡಕ್ಕೆ ಗೆಲುವು ಒದಗಿಸಿಕೊಟ್ಟರು.
ಸಾಯಿ ಸುದರ್ಶನ್ (35), ರಾಹುಲ್ ತೆವಾಟಿಯಾ (22) ಹಾಗೂ ಶಾರೂಕ್ ಖಾನ್ (14) ಸಹ ಉಪಯುಕ್ತ ಕಾಣಿಕೆ ನೀಡಿದರು.
ನಾಯಕನಾಗಿ 50ನೇ ಪಂದ್ಯದಲ್ಲಿ ಸಂಜು ಅರ್ಧಶತಕ...
ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ 50ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕದ (68*) ಸಾಧನೆ ಮಾಡಿದರು. ಹಾಗೆಯೇ ರಾಜಸ್ಥಾನ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ (25) ಬ್ಯಾಟರ್ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಜೋಸ್ ಅವರನ್ನು ಸಂಜು ಹಿಂದಿಕ್ಕಿದ್ದಾರೆ.
ಮತ್ತೊಂದೆಡೆ ಸಂಜು ಜೊತೆ ಮಹತ್ವದ ಜೊತೆಯಾಟ ಕಟ್ಟಿದ ರಿಯಾನ್ ಪರಾಗ್ ಆಕರ್ಷಕ ಅರ್ಧಶತಕದ (76) ಸಾಧನೆ ಮಾಡಿದರು. ಅಲ್ಲದೆ ರನ್ ಬೇಟೆಯಲ್ಲಿ ವಿರಾಟ್ ಕೊಹ್ಲಿ (316) ನಂತರದ ಸ್ಥಾನದಲ್ಲಿ ಪರಾಗ್ (261) ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.