ADVERTISEMENT

IPL 2024: ಆರ್‌ಸಿಬಿ ಕನಸು ಭಗ್ನ; ಸೋಲಿನ ಮಧ್ಯೆ ದಾಖಲೆ ಬರೆದ ಕಿಂಗ್ ಕೊಹ್ಲಿ

ನಾಗರಾಜ್ ಬಿ.
Published 23 ಮೇ 2024, 2:18 IST
Last Updated 23 ಮೇ 2024, 2:18 IST
<div class="paragraphs"><p>ವಿರಾಟ್ ಕೊಹ್ಲಿ, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್</p></div>

ವಿರಾಟ್ ಕೊಹ್ಲಿ, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್

   

(ಪಿಟಿಐ ಚಿತ್ರ)

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಈ ಬಾರಿಯೂ ಕೈಗೂಡಲಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಸೋಲಿಗೆ ಶರಣಾದ ಆರ್‌ಸಿಬಿ ಟೂರ್ನಿಯಿಂದಲೇ ಹೊರಬಿದ್ದಿದೆ. ಆರ್‌ಸಿಬಿ ಒಡ್ಡಿದ 173 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ, ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ADVERTISEMENT

ಈ ಪಂದ್ಯದ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಆರ್‌ಸಿಬಿ ಕನಸು ಭಗ್ನ...

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮೊದಲ ಎಂಟು ಪಂದ್ಯಗಳ ಪೈಕಿ ಕೇವಲ ಒಂದರಲ್ಲಷ್ಟೇ ಆರ್‌ಸಿಬಿ ಗೆಲುವು ದಾಖಲಿಸಿತ್ತು. ಅಲ್ಲದೆ ಸತತ ಆರು ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಗಿತ್ತು. ಆದರೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದಿದ್ದ ಫಫ್ ಡುಪ್ಲೆಸಿ ಬಳಗ ಬಳಿಕದ ಆರು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತ್ತು. ಈ ಪೈಕಿ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಉತ್ತಮ ರನ್‌ರೇಟ್ ಅಂತರದಲ್ಲಿ (18 ರನ್) ಗೆಲ್ಲುವ ಒತ್ತಡಕ್ಕೆ ಒಳಗಾಗಿತ್ತು. ಆದರೆ ಪ್ಲೇ-ಆಫ್‌ನಲ್ಲಿ ಮತ್ತೆ ಎಡವಿ ಬಿದ್ದಿದೆ. ಇದರಿಂದಾಗಿ ಅಭಿಮಾನಿಗಳಿಗೂ ನಿರಾಸೆ ಉಂಟಾಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ 8,000 ರನ್ ದಾಖಲೆ...

ಆರ್‌ಸಿಬಿ ಸೋಲಿನ ನಡುವೆಯೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 8,000 ರನ್ ಗಳಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಬೇರೆ ಯಾವ ಆಟಗಾರನೂ 7,000 ರನ್‌ಗಳ ಗಡಿಯನ್ನು ತಲುಪಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಐಪಿಎಲ್‌ನಲ್ಲಿ ಗರಿಷ್ಠ ರನ್ ಸರದಾರರು:

ವಿರಾಟ್ ಕೊಹ್ಲಿ: 8,004

ಶಿಖರ್ ಧವನ್: 6,769

ರೋಹಿತ್ ಶರ್ಮಾ: 6,628

ಡೇವಿಡ್ ವಾರ್ನರ್: 6,565

ಸುರೇಶ್ ರೈನಾ: 5,528

ಈ ಬಾರಿಯ ಐಪಿಎಲ್‌ನಲ್ಲೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಸಾಲಿನಲ್ಲೂ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 15 ಪಂದ್ಯಗಳಲ್ಲಿ 61.75ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕ ಹಾಗೂ ಒಂದು ಶತಕ ಸೇರಿದೆ. ಗರಿಷ್ಠ ಸ್ಕೋರ್ 113*.

ಮೂರು ಬಾರಿ ರನ್ನರ್-ಅಪ್ ಆಗಿದ್ದ ಆರ್‌ಸಿಬಿ...

ಆರ್‌ಸಿಬಿ ಮೂರು ಬಾರಿ ರನ್ನರ್-ಅಪ್ ಆಗಿತ್ತು. 2009, 2011 ಹಾಗೂ 2016ರಲ್ಲಿ ಫೈನಲ್‌ಗೆ ತಲುಪಿತ್ತು. ಮತ್ತೊಂದೆಡೆ ರಾಜಸ್ಥಾನ, ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ (2008) ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಒಂದೇ ಒಂದು ಅರ್ಧಶತಕ ದಾಖಲಾಗಲಿಲ್ಲ...

ಆರ್‌ಸಿಬಿ ಹಾಗೂ ಆರ್‌ಆರ್ ನಡುವಣ ಪಂದ್ಯದಲ್ಲಿ ಒಂದೇ ಒಂದು ಅರ್ಧಶತಕ ದಾಖಲಾಗಲಿಲ್ಲ. ಅಲ್ಲದೆ ಐಪಿಎಲ್ ಪಂದ್ಯವೊಂದರಲ್ಲಿ ವೈಯಕ್ತಿಕ ಅರ್ಧಶತಕ ಇಲ್ಲದೆ ಇತ್ತಂಡಗಳು ಸೇರಿ ಗಳಿಸಿದ ಎರಡನೇ ಗರಿಷ್ಠ ಮೊತ್ತ ಇದಾಗಿದೆ. ಈ ಪಂದ್ಯದಲ್ಲಿ ಒಟ್ಟು 346 ರನ್ ದಾಖಲಾದವು. ಇದೇ ಆವೃತ್ತಿಯಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವೆ ಚೆನ್ನೈಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಒಟ್ಟು 349 ರನ್ ದಾಖಲಾಗಿತ್ತು.

ಆರ್‌ಸಿಬಿ ಪರ ರಜತ್ ಪಾಟೀದಾರ್ ಗರಿಷ್ಠ 34 ರನ್ ಗಳಿಸಿದರೆ ರಾಜಸ್ಥಾನ ಪರ 45 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಟಾಪ್ ಸ್ಕೋರರ್ ಎನಿಸಿದರು.

ಶೇನ್ ವಾರ್ನ್ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್...

ಐಪಿಎಲ್‌ನಲ್ಲಿ ಅತಿ ಹೆಚ್ಚು ಜಯ ಗಳಿಸಿದ ರಾಜಸ್ಥಾನ ತಂಡದ ನಾಯಕರ ಪಟ್ಟಿಯಲ್ಲಿ ಶೇನ್ ವಾರ್ನ್ ದಾಖಲೆಯನ್ನು ಸಂಜು ಸ್ಯಾಮ್ಸನ್ ಸರಿಗಟ್ಟಿದ್ದಾರೆ. ನಾಯಕನಾಗಿ ಸಂಜು ಪಾಲಿಗಿದು 31ನೇ ಗೆಲುವು ಆಗಿದೆ.

ರಿಯಾನ್ ಪರಾಗ್ ಗಮನಾರ್ಹ ಸಾಧನೆ...

ಈ ಬಾರಿಯ ಐಪಿಎಲ್‌ನಲ್ಲಿ ರಿಯಾನ್ ಪರಾಗ್, 56.70ರ ಸರಾಸರಿಯಲ್ಲಿ ಒಟ್ಟು 567 ರನ್ ಗಳಿಸಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್‌ಕ್ಯಾಪ್ಡ್ ಬ್ಯಾಟರ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಯಶಸ್ವಿ ಜೈಸ್ವಾಲ್ 625 ಮತ್ತು 2008ರಲ್ಲಿ ಶಾನ್ ಮಾರ್ಶ್ 616 ರನ್ ಗಳಿಸಿದ್ದರು.

ಐಪಿಎಲ್ ಆವೃತ್ತಿಯೊಂದರಲ್ಲಿ ನಾಲ್ಕು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ರಿಷಭ್ ಪಂತ್ (2018ರಲ್ಲಿ 579ರನ್) ನಂತರದ ಸ್ಥಾನದಲ್ಲಿ ಪರಾಗ್ ಗುರುತಿಸಿಕೊಂಡಿದ್ದಾರೆ.

ರಾಜಸ್ಥಾನ ಆಟಗಾರರ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.