ADVERTISEMENT

IPL 2024 | RCB vs DC: ‘ಅಂಕ ಗಣಿತ’: ಆರ್‌ಸಿಬಿ ಅದೃಷ್ಟ ಪರೀಕ್ಷೆ

ಫಫ್‌ ಡುಪ್ಲೆಸಿ ಪಡೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಇಂದು l ವಿರಾಟ್, ಸಿರಾಜ್ ಮೇಲೆ ಕಣ್ಣು

ಗಿರೀಶ ದೊಡ್ಡಮನಿ
Published 12 ಮೇ 2024, 0:30 IST
Last Updated 12 ಮೇ 2024, 0:30 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಪ್ಲೇ ಆಫ್‌ ಪ್ರವೇಶಿಸಬಹುದೇ ಎಂಬ ಪ್ರಶ್ನೆಯ ಸುತ್ತಲೇ ಕ್ರಿಕೆಟ್‌ಪ್ರೇಮಿಗಳ ಮಾತುಕತೆಗಳು ಗಿರಕಿ ಹೊಡೆಯುತ್ತಿವೆ. 

ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇರುವ ಈ ಹೊತ್ತಿನಲ್ಲಿಯೂ  ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳನ್ನು ಖಚಿತವಾಗಿ ಹೇಳಲಾಗದಷ್ಟು ಪೈಪೋಟಿ ಏರ್ಪಟ್ಟಿದೆ. ಈ ತುರುಸಿನಲ್ಲಿ ಫಫ್ ಡುಪ್ಲೆಸಿ ಬಳಗಕ್ಕೂ ಒಂದು ಪುಟ್ಟ ಅವಕಾಶವಿದೆ. ಆದ್ದರಿಂದಲೇ ಆರ್‌ಸಿಬಿ ಆಡಲಿರುವ ಇನ್ನೆರಡೂ ಪಂದ್ಯಗಳು ಭಾರಿ ಕುತೂಹಲ ಕೆರಳಿಸಿವೆ. 

ADVERTISEMENT

ಅದರಲ್ಲೊಂದು ಹಣಾಹಣಿ ಭಾನುವಾರ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಬಳಗವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಜಯಿಸಿ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಆರ್‌ಸಿಬಿ ತಂಡವು ತವರಿನಂಗಳದ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣುತ್ತಿದೆ. ಸದ್ಯ 10 ಅಂಕ ಗಳಿಸಿರುವ ಆರ್‌ಸಿಬಿಯು ಇನ್ನುಳಿದ ಎರಡೂ ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಜಯಿಸಬೇಕು. ಇನ್ನೊಂದೆಡೆ 12 ಅಂಕಗಳನ್ನು ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್‌ಜೈಂಟ್ಸ್ ತಂಡಗಳು ತಮ್ಮ ಪಾಲಿನ ಎರಡೂ ಪಂದ್ಯಗಳನ್ನು ಸೋಲಬೇಕು. 

ಆರ್‌ಸಿಬಿಯು ತನ್ನ ಕೊನೆಯ ಪಂದ್ಯವನ್ನು (ಮೇ 18) ಚೆನ್ನೈ ವಿರುದ್ಧ ಆಡಲಿದೆ. ಋತುರಾಜ್ ಗಾಯಕವಾಡ ಬಳಗವು ಭಾನುವಾರ ಮಧ್ಯಾಹ್ನ ತನ್ನ ತವರಿನಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಆಡಲಿದೆ. ಅದರಲ್ಲಿ ಗೆದ್ದರೆ ಚೆನ್ನೈ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ ಕಠಿಣವಾಗಲಿದೆ.  ಆರ್‌ಸಿಬಿ ತಂಡವು ಒಂದು ಪಂದ್ಯ ಸೋತರೂ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ. 

ಅಂಕಪಟ್ಟಿಯ ಈ ಹಾವು–ಏಣಿಯ ಆಟದ ನಡುವೆ ಭಾನುವಾರದ ಪಂದ್ಯವು ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳೆರಡಕ್ಕೂ ಮಹತ್ವದ್ದಾಗಿದೆ. ಆದರೆ ಡೆಲ್ಲಿ ತಂಡವು ರಿಷಭ್ ಪಂತ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ. 

ಆರಂಭಿಕ ಹಂತದಲ್ಲಿ ಆರ್‌ಸಿಬಿಯ ಹಿನ್ನಡೆಗೆ ಕಾರಣವಾಗಿದ್ದು ಬೌಲಿಂಗ್ ಪಡೆ ಈಗ ಪುಟಿದೆದ್ದು ಪಂದ್ಯವನ್ನು ಗೆಲ್ಲಿಸಿಕೊಡುವ ಆಟವಾಡುತ್ತಿದೆ. ಅದರಲ್ಲೂ ವೇಗಿ ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಅಸ್ತ್ರಗಳು ಎದುರಾಳಿ ಬ್ಯಾಟರ್‌ಗಳಿಗೆ ಮತ್ತೆ ಸಿಂಹಸ್ವಪ್ನವಾಗಿ ಕಾಡುತ್ತಿವೆ. ಪವರ್‌ ಪ್ಲೇ ಮತ್ತು ಡೆತ್‌ ಓವರ್‌ಗಳಲ್ಲಿ ಅವರು ತಮ್ಮ ಕೈಚಳಕ ಮೆರೆಯುತ್ತಿದ್ದಾರೆ. ಅವರೊಂದಿಗೆ ಎಡಗೈ ವೇಗಿ ಯಶ್ ದಯಾಳ್ ಕೂಡ ಸಮರ್ಥವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್‌ ಸ್ವಪ್ನಿಲ್ ಸಿಂಗ್ ಮತ್ತು ಕರಣ್ ಶರ್ಮಾ ಅವರ ಮೋಡಿಯೂ ತಂಡದ ಬಲ ಹೆಚ್ಚಿಸಿದೆ. 

ಈ ಬೌಲಿಂಗ್ ಪಡೆಯು ಪಟಾಕಿ ಗಳಂತೆ ರನ್ ಸಿಡಿಸಿರುವ ಡೆಲ್ಲಿಯ ಆರಂಭಿಕ ಬ್ಯಾಟರ್ ಜೇಕ್ ಫ್ರೆಸರ್ ಮೆಕ್‌
ಗರ್ಕ್ ಅವರನ್ನು ಕಟ್ಟಿಹಾಕುವತ್ತ ಹೆಚ್ಚು ಶಕ್ತಿ ವಿನಿಯೋಗಿಸಬೇಕಿದೆ. ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್‌, ರಸಿಕ್ ಸಲಾಮ್ ಅವರು ಸ್ಫೋಟಕ ಶೈಲಿಯ ಆಟಗಾರರಾಗಿದ್ದಾರೆ. ಡೆಲ್ಲಿಯ ಬೌಲರ್‌ಗಳಾದ ಖಲೀಲ್ ಅಹಮದ್, ಮುಕೇಶ್ ಕುಮಾರ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಮುಂದೆ ಕಠಿಣ ಸವಾಲು ಇದೆ. 

ಆರೆಂಜ್ ಕ್ಯಾಪ್ ಧರಿಸಿಕೊಂಡಿರುವ ವಿರಾಟ್ ಕೊಹ್ಲಿ, ಫಫ್ ಡುಪ್ಲೆಸಿ, ವಿಲ್ ಜ್ಯಾಕ್ಸ್‌, ದಿನೇಶ್ ಕಾರ್ತಿಕ್ ಮತ್ತು ರಜತ್ ಪಾಟೀದಾರ್ ಅವರ ’ಓಟ‘ಗಳಿಗೆ ಕಡಿವಾಣ ಹಾಕುವುದು ಸುಲಭದ ಕೆಲಸವಲ್ಲ.  

ಬೆಂಗಳೂರಿನ ಪಿಚ್‌ನಲ್ಲಿ ಯಥಾ ಪ್ರಕಾರ ರನ್‌ಗಳ ಹೊಳೆ ಹರಿಯವ ಎಲ್ಲ ಸಾಧ್ಯತೆಗಳೂ ಇವೆ. ಸಿಕ್ಸರ್‌ಗಳು, ಬೌಂಡರಿಗಳ ಮಳೆಯ ನಿರೀಕ್ಷೆ ಸಹಜವಾಗಿಯೇ ಗರಿಗೆದರಿದೆ. ಆದರೆ  ಮುಂಗಾರುಪೂರ್ವದ ಮಳೆ ಸುರಿಯುವ ಸಾಧ್ಯತೆಗಳೂ ಇವೆ. ‌

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಅ್ಯಪ್

ಈ ಸಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೊಣೆ ನನಗೆ ನೀಡಲಾಗಿದೆ. ಕೊಹ್ಲಿ, ಕಾರ್ತಿಕ್ ಮಾರ್ಗದರ್ಶನದಲ್ಲಿ ನನ್ನ ಕೌಶಲಗಳು ಉತ್ತಮಗೊಂಡಿವೆ
-ರಜತ್ ಪಾಟೀದಾರ್, ಆರ್‌ಸಿಬಿ ಬ್ಯಾಟರ್
ರಿಷಭ್ ಪಂತ್ ಈ ಪಂದ್ಯಕ್ಕೆ ಇಲ್ಲದಿರುವುದು ತಂಡಕ್ಕೆ ಬಹುದೊಡ್ಡ ಕೊರತೆಯಾಗಿದೆ. ಅವರು ಉತ್ತಮ ದಾಖಲೆ ಹೊಂದಿದ್ದಾರೆ
ರಿಕಿ ಪಾಂಟಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.