ಬೆಂಗಳೂರು: ಎಡಗೈ ವೇಗಿ ಯಶ್ ದಯಾಳ್ ಅವರ ‘ಕೈಚಳಕ’ದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಪ್ರವೇಶದ ಆಸೆ ಜೀವಂತವಾಗುಳಿಯಿತು.
188 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಗಳೂರು ಬಳಗವು 47 ರನ್‌ಗಳಿಂದ ಸೋಲಿಸಿತು. ಫಫ್ ಡುಪ್ಲೆಸಿ ಬಳಗಕ್ಕೆ ಇದು ಸತತ ಐದನೇ ಗೆಲುವು. ಇದರೊಂದಿಗೆ ಒಟ್ಟು 12 ಅಂಕ ಗಳಿಸಿದ ತಂಡವು ಐದನೇ ಸ್ಥಾನಕ್ಕೇರಿತು.
ಇನಿಂಗ್ಸ್‌ನ ಮೂರನೇ ಓವರ್ ಬೌಲಿಂಗ್ ಮಾಡಲು ಚೆಂಡು ಪಡೆದ ಯಶ್ ಮೊದಲ ಎಸೆತದಲ್ಲಿಯೇ ಅಭಿಷೇಕ್ ಪೊರೆಲ್ ವಿಕೆಟ್ ಗಳಿಸಿದರು. ಎರಡನೇ ಎಸೆತದಲ್ಲಿ ಡೆಲ್ಲಿಯ ಪ್ರಮುಖ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರನ್ನು ದುರದೃಷ್ಟ ಕಾಡಿತು. ಬ್ಯಾಟರ್ ಶಾಯ್ ಹೋಪ್ ಹೊಡೆದ ಚೆಂಡು ನೇರವಾಗಿ ಸಾಗಿತ್ತು. ಅದನ್ನು ಹಿಡಿಯಲು ಪ್ರಯತ್ನಿಸಿದ ಬೌಲರ್ ಯಶ್ ಅವರ ಬೆರಳುಗಳನ್ನು ಸವರಿದ ಚೆಂಡು ನಾನ್‌ಸ್ಟ್ರೈಕರ್ ತುದಿಯ ಸ್ಟಂಪ್‌ಗಳಿಗೆ ಅಪ್ಪಳಿಸಿತು. ಕ್ರೀಸ್‌ನಿಂದ ಮುಂದೆ ಬಂದುಬಿಟ್ಟಿದ್ದ ಜೇಕ್ ರನ್ ಔಟ್ ಆದರು. 22 ವರ್ಷದ ಜೇಕ್ ಔಟಾಗಿದ್ದು ಡೆಲ್ಲಿ ತಂಡಕ್ಕೆ ದೊಡ್ಡ ಆಘಾತವಾಯಿತು. ಜೇಕ್ ತಮ್ಮ ಆಟಕ್ಕೆ ಕುದುರಿದ್ದರೆ ಡೆಲ್ಲಿಗೆ ಜಯದ ಅವಕಾಶ ಹೆಚ್ಚಿತ್ತು.
ಮೊದಲ ಓವರ್‌ನಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ಡೇವಿಡ್ ವಾರ್ನರ್ ಔಟಾಗಿದ್ದರು. ಬೇರೆ ಬ್ಯಾಟರ್‌ಗಳಿಂದ ನಿರೀಕ್ಷಿತ ಸಾಮರ್ಥ್ಯ ಹೊರಹೊಮ್ಮಲಿಲ್ಲ. ರಿಷಭ್ ಪಂತ್ ಗೈರುಹಾಜರಿ ಎದ್ದುಕಂಡಿತು.
ಈ ಹಂತದಲ್ಲಿಯೂ ಎದೆಗುಂದದ ಹಂಗಾಮಿ ನಾಯಕ ಅಕ್ಷರ್ ಪಟೇಲ್ (57; 39ಎ) ಹೋರಾಟ ಮಾಡಿದರು. ಆದರೆ ಅವರ ಆಟಕ್ಕೂ ಯಶ್ (3.1–0–20–3) ಅಡ್ಡಿಯಾದರು. ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲಲು ಆರ್‌ಸಿಬಿ ಬೌಲರ್‌ಗಳು ಬಿಡಲಿಲ್ಲ. ಇದರಿಂದಾಗಿ ಡೆಲ್ಲಿ ತಂಡವು 19.1 ಓವರ್‌ಗಳಲ್ಲಿ 140 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ನಾಲ್ಕು ಕ್ಯಾಚ್ ಕೈಬಿಟ್ಟ ಡೆಲ್ಲಿ
ಹಾಗೆ ನೋಡಿದರೆ ಈ ಪಂದ್ಯದಲ್ಲಿ ಡೆಲ್ಲಿ ತಂಡದ ಸೋಲಿನಲ್ಲಿ ಫೀಲ್ಡಿಂಗ್ ಲೋಪಗಳೂ ಪ್ರಮುಖವಾಗಿದ್ದವು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಡೆಲ್ಲಿ ತಂಡವು 36 ರನ್‌ಗಳಾಗುಷ್ಟರಲ್ಲಿ ಫಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿಯವರ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.ಈ ಹಂತದಲ್ಲಿ ಆತಿಥೇಯ ಬಳಗವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಬಹುದಿತ್ತು.
ಆದರೆ, ಡೆಲ್ಲಿ ಫೀಲ್ಡರ್‌ಗಳು ಕೈಬಿಟ್ಟ ನಾಲ್ಕು ಕ್ಯಾಚ್‌ಗಳಿಂದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 187 ರನ್ ಗಳಿಸಿತು.
ಇದರಲ್ಲಿ ತಲಾ ಎರಡು ಜೀವದಾನ ಗಳಿಸಿದ ರಜತ್ ಪಾಟೀದಾರ್ (52; 32ಎ, 4X3, 6X3) ಮತ್ತು ವಿಲ್ ಜ್ಯಾಕ್ಸ್ (41; 29ಎ, 4X3, 6X2) ಮೂರನೇ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿದರು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಹಾಕಿದ ಒಂಬತ್ತನೇ ಓವರ್‌ನಲ್ಲಿ ಜ್ಯಾಕ್ಸ್ ಅವರ ಕ್ಯಾಚ್ ಅನ್ನು ಅಕ್ಷರ್ ಪಟೇಲ್ ಹಾಗೂ ಅದೇ ಓವರ್‌ನ ಐದನೇ ಎಸೆತದಲ್ಲಿ ರಜತ್ ಅವರ ಸುಲಭವಾದ ಕ್ಯಾಚ್ ಅನ್ನು ಲಾಂಗ್ ಆನ್ ಫೀಲ್ಡರ್ ಶಾಯ್ ಹೋಪ್ ಕೈಚೆಲ್ಲಿದರು. ಆಗ ತಂಡದ ಮೊತ್ತವು ಮೂರಂಕಿ ಮುಟ್ಟಿರಲಿಲ್ಲ.
ಖಲೀಲ್ ಅಹಮದ್ ಹಾಕಿದ 10ನೇ ಓವರ್‌ನಲ್ಲಿಯೂ ಜೇಕ್ ಫ್ರೆಸರ್ ಮೆಕ್‌ಗುರ್ಕ್ ಬಿಟ್ಟ ಕ್ಯಾಚ್‌ನಿಂದಾಗಿ ಜ್ಯಾಕ್ಸ್ ಆಟ ಮುಂದುವರಿಯಿತು. ನಂತರದ ಓವರ್‌ನಲ್ಲಿ ರಸಿಕ್ ಧಾರ್ ಎಸೆತವನ್ನು ಆಡಿದ ರಜತ್ ಅವರ ಕ್ಯಾಚ್ ಪಡೆಯುವ ಅಕ್ಷರ್ ಪಟೇಲ್ ಪ್ರಯತ್ನ ಕೈಗೂಡಲಿಲ್ಲ.
ಇದರಿಂದಾಗಿ ರಜತ್, ಈ ಐಪಿಎಲ್‌ನಲ್ಲಿ 5ನೇ ಅರ್ಧಶತಕ ಪೂರೈಸಿದರು.. 29 ಎಸೆತಗಳಲ್ಲಿ ಅವರು 50ರ ಗಡಿ ಮುಟ್ಟಿದರು. ಇದಾಗಿ ಕೆಲವು ನಿಮಿಷಗಳ ನಂತರ ರಸಿಕ್ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ತಮ್ಮ ಎಡಕ್ಕೆ ಡೈವ್ ಮಾಡಿದ ಪಡೆದ ಆಕರ್ಷಕ ಕ್ಯಾಚ್‌ಗೆ ರಜತ್ ಆಟಕ್ಕೆ ತೆರೆಬಿತ್ತು. ಅರ್ಧಶತಕದತ್ತ ಹೆಜ್ಜೆಯಿಟ್ಟಿದ್ದ ಜ್ಯಾಕ್ಸ್ ಆಟಕ್ಕೆ ಕುಲದೀಪ್ ಕಡಿವಾಣ ಹಾಕಿದರು.
ದಿನೇಶ್ ಕಾರ್ತಿಕ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಸ್ವಪ್ನಿಲ್ ಸಿಂಗ್ ಅವರು ಸೊನ್ನೆ ಸುತ್ತಿದರು. ಕ್ಯಾಮರಾನ್ ಗ್ರಿನ್ ಅವರೊಬ್ಬರು (ಅಜೇಯ 32) ಹೋರಾಟ ಮಾಡಿದರು.
ಕೊಹ್ಲಿ–ಇಶಾಂತ್ ಕೀಟಲೆ
ಬಾಲ್ಯದ ಸ್ನೇಹಿತರಾದ ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ ಅವರ ಜಿದ್ದಾಜಿದ್ದಿಗೆ ಬೆಂಗಳೂರು ಕ್ರಿಕೆಟ್‌ಪ್ರಿಯರು ಸಾಕ್ಷಿಯಾದರು. ತಂಡಕ್ಕೆ ಉತ್ತಮ ಆರಂಭ ನೀಡಿದ ಕೊಹ್ಲಿ 3 ಸಿಕ್ಸರ್‌ಗಳಿದ್ದ 27 ರನ್ ಗಳಿಸಿದರು. ಅದರಲ್ಲಿ ಎರಡು ಇಶಾಂತ್ ಅವರ ಬೌಲಿಂಗ್‌ನಲ್ಲಿಯೇ ಹೊಡೆದಿದ್ದರು. ಆದರೆ ನಾಲ್ಕನೇ ಓವರ್‌ನಲ್ಲಿ ಇಶಾಂತ್ ಅವರ ಎಸೆತವನ್ನು ಆಡುವ ಭರದಲ್ಲಿ ಕೊಹ್ಲಿ ವಿಕೆಟ್‌ಕೀಪರ್ ಪೊರೆಲ್‌ಗೆ ಕ್ಯಾಚಿತ್ತರು. ಇಶಾಂತ್ ಸಂಭ್ರಮಿಸಿದರು. ಡಗ್‌ಔಟ್‌ಗೆ ಮರಳುತ್ತಿದ್ದ ವಿರಾಟ್ ಅವರನ್ನು ತಳ್ಳುತ್ತ ಕೀಟಲೆ ಮಾಡಿದರು. ವಿರಾಟ್ ನಸುನಗುತ್ತಲೇ ಸಾಗಿದರು. ನಂತರದ ಪಂದ್ಯದ ಕೊನೆಯಲ್ಲಿ ಇಶಾಂತ್ ಬ್ಯಾಟಿಂಗ್ ಬಂದಾಗ ವಿರಾಟ್ ‘ಮುಯ್ಯಿ’ ತೀರಿಸಿಕೊಂಡರು. ತಮ್ಮ ಹಳೆಯ ಸ್ನೇಹಿತನನ್ನು ಕಾಡಿದರು. ಇಬ್ಬರ ತುಂಟಾಟ ಪ್ರೇಕ್ಷಕರಲ್ಲಿಯೂ ನಗೆಯುಕ್ಕಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.