ADVERTISEMENT

IPL RCB v GT:ಪವರ್‌ಪ್ಲೇನಲ್ಲಿ ಮಿಂಚಿದ ಸಿರಾಜ್, ಸಾಧಾರಣ ಮೊತ್ತ ಗಳಿಸಿದ ಟೈಟನ್ಸ್

ಗಿರೀಶ ದೊಡ್ಡಮನಿ
Published 4 ಮೇ 2024, 14:02 IST
Last Updated 4 ಮೇ 2024, 14:02 IST
<div class="paragraphs"><p>ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಅವರನ್ನು ಅಭಿನಂದಿಸಿದ ಸಹ ಆಟಗಾರರು</p></div>

ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಅವರನ್ನು ಅಭಿನಂದಿಸಿದ ಸಹ ಆಟಗಾರರು

   

  – ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರು: ಪವರ್‌ಪ್ಲೇ ಅವಧಿಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಡೆತ್‌ ಓವರ್‌ಗಳಲ್ಲಿ ಯಶ್ ದಯಾಳ್ ಮಾಡಿದ ಚುರುಕಿನ ದಾಳಿಯಿಂದಾಗಿ ಗುಜರಾತ್ ಟೈಟನ್ಸ್ ಸಾಧಾರಣ ಮೊತ್ತ ಗಳಿಸಿತು. 

ADVERTISEMENT

ಬಲಗೈ ವೇಗಿ ಸಿರಾಜ್ (29ಕ್ಕೆ2) ಹಾಗೂ ದಯಾಳ್ (21ಕ್ಕೆ2) ಅವರ ದಾಳಿಗೆ ಗುಜರಾತ್ ಟೈಟನ್ಸ್ ತಂಡವು ಇನಿಂಗ್ಸ್ ಆರಂಭದಲ್ಲಿಯೇ ತತ್ತರಿಸಿತು. ಇದರಿಂದಾಗಿ 19.3 ಓವರ್‌ಗಳಲ್ಲಿ 147 ರನ್‌ಗಳ  ಸಾಧಾರಣ ಮೊತ್ತ ದಾಖಲಿಸಿತು.

ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಪಂದ್ಯವೊಂದರ ಪವರ್‌ಪ್ಲೇನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು (3ಕ್ಕೆ23) ಗುಜರಾತ್ ಟೈಟನ್ಸ್ ದಾಖಲಿಸಿತು. ಅದಕ್ಕೆ ಕಾರಣವಾಗಿದ್ದು ಸಿರಾಜ್ ಮತ್ತು ಪಿಚ್!

ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್ ಬೌಲಿಂಗ್ ಮಾಡಲು ನಾಯಕ ಫಫ್ ಡುಪ್ಲೆಸಿಯವರು ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಅವರಿಗೆ ಚೆಂಡು ನೀಡಿದರು.  ಒಂದಿಷ್ಟು ಹಸಿರು ಗರಿಕೆಗಳಿದ್ದ ಪಿಚ್‌ನಲ್ಲಿ ಚೆಂಡು ಎತ್ತರಕ್ಕೆ ಪುಟಿಯದೇ ಹೆಚ್ಚು ವೇಗವೂ ಇಲ್ಲದೇ ಸಾಗುತ್ತಿತ್ತು. ಅದರಿಂದಾಗಿ ಗುಜರಾತ್ ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ ರನ್‌ ಗಳಿಸಲು ಪರದಾಡಿದರು.

ಈ ಮರ್ಮವನ್ನು ಅರಿತುಕೊಂಡ ಸಿರಾಜ್ ಇನಿಂಗ್ಸ್‌ನ ಎರಡನೇ ಓವರ್‌ ನಲ್ಲಿ ಆಫ್‌ಸ್ಟಂಪ್ ಹೊರಗೆ ಎಸೆತ ಪ್ರಯೋಗಿಸಿದರು. ಸಹಾ ಕಟ್ ಮಾಡುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತರು. ತಮ್ಮ ಎರಡನೇ ಓವರ್‌ನಲ್ಲಿ ಸಿರಾಜ್ ಬಿಗಿ ದಾಳಿ ನಡೆಸಿದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಶುಭಮನ್ ಗಿಲ್ ಆಘಾತ ಅನುಭವಿಸಿದರು. ಡೀಪ್‌  ಫೀಲ್ಡರ್ ವೈಶಾಖ ವಿಜಯಕುಮಾರ್ ಚುರುಕಾಗಿ ಓಡಿ ಬಂದು ಕ್ಯಾಚ್ ಪಡೆದರು. ಕ್ರೀಡಾಂಗಣದಲ್ಲಿದ್ದ 34 ಸಾವಿರ ಪ್ರೇಕ್ಷಕರ ಆನಂದ ಮುಗಿಲುಮುಟ್ಟಿತು.

ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ (6; 14ಎಸೆತ) ಕೂಡ ಆತ್ಮವಿಶ್ವಾಸದಿಂದ ಆಡಲಿಲ್ಲ. ಪವರ್‌ಪ್ಲೇನ ಕೊನೆಯ ಓವರ್ ಬೌಲಿಂಗ್ ಮಾಡಿದ ಕ್ಯಾಮರಾನ್ ಗ್ರೀನ್ ಎಸೆತದಲ್ಲಿ ಕೊಹ್ಲಿ ಪಡೆದ ಕ್ಯಾಚ್‌ಗೆ ಸಾಯಿ ನಿರ್ಗಮಿಸಿದರು.

ಮಿಲ್ಲರ್–ಶಾರೂಕ್ ಜೊತೆಯಾಟ

ಸಂಕಷ್ಟದಲ್ಲಿದ್ದ ಗುಜರಾತ್ ತಂಡಕ್ಕೆ ಡೇವಿಡ್ ಮಿಲ್ಲರ್ ಮತ್ತು ಶಾರೂಕ್ ಖಾನ್ ಅವರು ಚೇತರಿಕೆ ನೀಡುವ ಪ್ರಯತ್ನ ಮಾಡಿದರು.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಶಾರೂಕ್ (37; 24ಎ) ಮತ್ತು ಮಿಲ್ಲರ್ (30; 20ಎ)  61 ರನ್‌ ಸೇರಿಸಿದರು. 

ಆದರೆ ಅವರ ಆಟವು ಅಬ್ಬರದ ಬದಲಿಗೆ ಎಚ್ಚರಿಕೆಯಿಂದ ಕೂಡಿತ್ತು. ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ಸವಾಲು ಅವರ ಮುಂದಿತ್ತು. ಇದರಿಂದಾಗಿ ಬೌಂಡರಿಗಳ ಸಂಖ್ಯೆಯೂ ಕಡಿಮೆಯಾಯಿತು.

ತಂಡದ ಮೊದಲ ಸಿಕ್ಸರ್ ದಾಖಲಾಗಿದ್ದು10ನೇ ಓವರ್‌ನಲ್ಲಿ. ಕರ್ಣ ಶರ್ಮಾ ಹಾಕಿದ ಎಸೆತವನ್ನು ಮಿಡ್‌ವಿಕೆಟ್‌ಗೆ ಎತ್ತಿದ ಮಿಲ್ಲರ್ ಸಿಕ್ಸರ್ ಗಳಿಸಿದರು. 12ನೇ ಓವರ್‌ನಲ್ಲಿ ಶರ್ಮಾ ಅವರು ಮಿಲ್ಲರ್ ವಿಕೆಟ್ ಪಡೆದು ಮುಯ್ಯಿ ತೀರಿಸಿಕೊಂಡರು. ನಂತರದ ಓವರ್‌ನಲ್ಲಿ ಶಾರೂಕ್ ರನ್‌ಔಟ್ ಆಗಲು ವಿರಾಟ್‌ ಕೊಹ್ಲಿಯ ಚುರುಕಾದ ಫೀಲ್ಡಿಂಗ್ ಮತ್ತು ಥ್ರೋ ಕಾರಣವಾಯಿತು.

ಆಗ ತಂಡದ ಮೊತ್ತವು 100ರ ಗಡಿಯನ್ನೂ ಮುಟ್ಟಿರಲಿಲ್ಲ. ಈ ಹಂತದಲ್ಲಿ ಕ್ರೀಸ್‌ನಲ್ಲಿ ಜೊತೆಗೂಡಿದ ರಾಹುಲ್ ತೆವಾಟಿಯಾ (35; 21ಎ, 4X5, 6X1) ಮತ್ತು ರಶೀದ್ ಖಾನ್ (18. 14ಎ) ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಇವರಿಬ್ಬರ ವಿಕೆಟ್‌ಗಳನ್ನೂ 18ನೇ ಓವರ್‌ ಒಂದರಲ್ಲಿಯೇ ಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡ  ಎಡಗೈ ವೇಗಿ ಯಶ್ ಮಿಂಚಿದರು. 

ವೈಶಾಖ ಮಿಂಚು

ಕೊನೆಯ ಓವರ್ ಬೌಲಿಂಗ್ ಮಾಡುವ ಅವಕಾಶ ಪಡೆದ ‘ಸ್ಥಳೀಯ ಹೀರೊ‘ ವೈಶಾಖ ಯಶಸ್ವಿಯಾದರು. ಅದೊಂದೇ ಓವರ್‌ನಲ್ಲಿ ‘ಇಂಪ್ಯಾಕ್ಟ್‌ ಪ್ಲೇಯರ್’ ವಿಜಯಶಂಕರ್ ಮತ್ತು ಮಾನವ ಸುತಾರ ಅವರ ವಿಕೆಟ್ ಕಬಳಿಸಿದರು. ಅಲ್ಲದೇ ಕೀಪರ್ ಕಾರ್ತಿಕ್‌ ಜೊತೆಗೂಡಿ ಮೋಹಿತ್ ಶರ್ಮಾ ಅವರನ್ನು ರನ್‌ಔಟ್ ಕೂಡ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.