ಗುವಾಹಟಿ: ರಿಯಾನ್ ಪರಾಗ್ ಅವರ ತವರೂರಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಬುಧವಾರ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡದ ಗೆಲುವುಗಳಲ್ಲಿ ರಿಯಾನ್ ಕಾಣಿಕೆ ಮಹತ್ವದ್ದಾಗಿದೆ. ತಂಡಕ್ಕೆ ಗುವಾಹಟಿಯು ಎರಡನೇ ತವರು ತಾಣವಾಗಿದೆ. ಕಳೆದ ಆರು ವರ್ಷಗಳಿಂದ ತಂಡದಲ್ಲಿರುವ ರಿಯಾನ್ ಅವರ ಆಟ ಪರಿಪಕ್ವಗೊಳ್ಳುತ್ತಿದೆ. ಈ ಸಲದ ಟೂರ್ನಿಯಲ್ಲಿ ಅವರು 153ರ ಸ್ಟ್ರೈಕ್‌ರೇಟ್‌ನಲ್ಲಿ 483 ರನ್ ಗಳಿಸಿದ್ದಾರೆ.
ಮುಂದಿನ ಅಂತರರಾಷ್ಟ್ರೀಯ ಟಿ20 ಸರಣಿಗಳಲ್ಲಿ ಭಾರತ ತಂಡದಲ್ಲಿ ಆಯ್ಕೆಯಾಗಲು ಅರ್ಹತೆ ಇರುವ ಆಟಗಾರನಾಗಿ ರಿಯಾನ್ ಬೆಳೆದಿದ್ದಾರೆ. ಭಾರತ ತಂಡದಲ್ಲಿ ಆಡುವ ಈಶಾನ್ಯ ಭಾರತದ ಮೊಟ್ಟಮೊದಲ ಆಟಗಾರನಾಗಲು 22 ವರ್ಷದ ರಿಯಾನ್ ಅವರೂ ಕಾತರಿಸಿದ್ದಾರೆ.
ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ಬಳಗವು ಪ್ಲೇ ಆಫ್‌ನಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಈ ಪಂದ್ಯದ ಗೆಲುವು ಅಗತ್ಯವಾಗಿದೆ.
19 ಅಂಕಗಳೊಂದಿಗೆ ಕೆಕೆಆರ್ ತಂಡವು ಈಗಾಗಲೇ ಮೊದಲ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿಯಾಗಿದೆ. 16 ಅಂಕ ಗಳಿಸಿರುವ ರಾಜಸ್ಥಾನ ತಂಡವು 18 ಅಂಕ ಪಡೆದರೆ ಎರಡನೇ ಸ್ಥಾನ ಗಟ್ಟಿಯಾಗುತ್ತದೆ. ತನ್ನ ಕಳೆದ ಪಂದ್ಯದಲ್ಲಿ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿತ್ತು. ಈಗ ಜಯದ ಹಾದಿಗೆ ಮರಳಬೇಕಿದೆ. ಜೋಸ್ ಬಟ್ಲರ್ ಅವರು ಇಂಗ್ಲೆಂಡ್‌ಗೆ ಮರಳಿರುವುದರಿಂದ ಉತ್ತಮ ಆರಂಭ ನೀಡುವ ಹೊಣೆ ಯಶಸ್ವಿ ಜೈಸ್ವಾಲ್ ಮೇಲೆ ಹೆಚ್ಚಿದೆ. ಸಂಜು, ಪರಾಗ್, ಶಿಮ್ರಾನ್ ಹೆಟ್ಮೆಯರ್ ಅವರೂ ಹೆಚ್ಚು ರನ್ ಗಳಿಸಬೇಕು. ಬೌಲಿಂಗ್ ವಿಭಾಗ ಉತ್ತಮವಾಗಿದೆ.
ಸ್ಪಿನ್ನರ್ ಯಜುವೇಂದ್ರ ಚಾಹಲ್, ಆರ್. ಅಶ್ವಿನ್ ಹಾಗೂ ವೇಗಿ ಟ್ರೆಂಟ್ ಬೌಲ್ಟ್ ಅವರು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬಲ್ಲ ಸಮರ್ಥರು. ಈಗಾಗಲೇ ಪ್ಲೇಆಫ್ ಹಾದಿಯಿಂದ ಹೊರಬಿದ್ದಿರುವ ಪಂಜಾಬ್ ತಂಡವು ಸಮಾಧಾನಕರ ಗೆಲುವಿಗಾಗಿ ಆಡಲಿದೆ.
ಈ ತಂಡಕ್ಕೂ ಜಾನಿ ಬೆಸ್ಟೊ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಅಲಭ್ಯತೆ ಕಾಡಲಿದೆ. ಪ್ರಭಸಿಮ್ರನ್ ಸಿಂಗ್, ಶಶಾಂಕ್ ಸಿಂಗ್, ಆಶುತೋಷ್ ಶರ್ಮಾ, ರಿಲೀ ರೊಸೊ ಹಾಗೂ ಆಲ್‌ರೌಂಡರ್ ಸ್ಯಾಮ್ ಕರನ್ ಅವರ ಮೇಲೆ ಬ್ಯಾಟಿಂಗ್ ವಿಭಾಗದ ಹೊಣೆ ಇದೆ. ಗಾಯಗೊಂಡಿರುವ ಶಿಖರ್ ಧವನ್ ಅವರ ಗೈರುಹಾಜರಿಯೂ ತಂಡಕ್ಕೆ ಕಾಡುತ್ತಿದೆ.
ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್ ಹಾಗೂ ಕನ್ನಡಿಗ ವಿದ್ವತ್ ಕಾವೇರಪ್ಪ ಅವರಿಗೆ ತಮ್ಮ ಪ್ರತಿಭೆ ತೋರಲು ಇದೊಂದು ಅವಕಾಶವಾಗಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.