ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಈ ಬಾರಿ ಟೀಕೆಗಳನ್ನು ಎದುರಿಸಿರಬಹುದು. ಆದರೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬೆಂಬಲಕ್ಕೆ ನಿಂತಿದ್ದು, ಈ ನಿಯಮದಿಂದ ಪಂದ್ಯಗಳಲ್ಲಿ ನಿಕಟ ಪೈಪೋಟಿ ಏರ್ಪಡುತ್ತಿದೆ ಎಂದಿದ್ದಾರೆ.
ಕಳೆದ ಋತುವಿನಲ್ಲಿ ಜಾರಿಗೆ ಬಂದಿದ್ದ ಈ ನಿಯಮ ಈ ಬಾರಿ ಹೆಚ್ಚು ಚರ್ಚೆಗೆ ಒಳಗಾಗಿದೆ. ಈ ನಿಯಮದಿಂದಾಗಿ ಆಲ್‌ರೌಂಡರ್‌ಗಳ ಔಚಿತ್ಯ ಕಡಿಮೆಯಾಗುತ್ತಿದೆ ಎಂದು ಕೆಲವು ತಜ್ಞರು ಮತ್ತು ಹಾಲಿ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
‘ಹೊಸ ನಿಯಮ ಏನಾದರೂ ಬಂದಾಗ, ಅದು ಯಾಕೆ ಸರಿಯಲ್ಲ ಎಂಬ ಸಮರ್ಥನೆಗೆ ಮುಂದಾಗುತ್ತಾರೆ’ ಎಂದು ಶಾಸ್ತ್ರಿ ಹೇಳಿದರು.
‘ಕಾಲಕ್ಕೆ ತಕ್ಕಂತೆ ಆಟವೂ ಬೆಳವಣಿಗೆಯಾಗುತ್ತದೆ’ ಎಂದು ಶಾಸ್ತ್ರಿ ನಿಯಮದ ಪರ ಮಾತನಾಡಿದರು.
‘ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉತ್ತಮವಾಗಿದೆ. ಕಾಲ ಬದಲಾದ ಹಾಗೆ ನಾವೂ ಹೊಂದಿಕೊಳ್ಳಬೇಕಾಗುತ್ತದೆ. ಇತರ ಕ್ರೀಡೆಗಳಲ್ಲೂ ಪರಿವರ್ತನೆ ಕಾಣಬಹುದು’ ಎಂದು ಆರ್.ಅಶ್ವಿನ್ ತಮ್ಮ ಯು ಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ಇದು ಉತ್ತಮ ನಿಯಮವೆಂದು ನನ್ನ ಭಾವನೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ನಿಕಟ ಅಂತ್ಯ ಕಂಡ ಪಂದ್ಯಗಳಿದ್ದವು. ಇದರಿಂದ ಸಾಕಷ್ಟು ಪರಿಣಾಮವಾಗುತ್ತಿದೆ’ ಎಂದು ಆಫ್ ಸ್ಪಿನ್ನರ್ ಹೇಳಿದರು.
‘ಈ ನಿಯಮ ಶಾಶ್ವತವೇನಲ್ಲ. ಪರಿಕ್ಷಾರ್ಥವಾಗಿ ಅಳವಡಿಸಿದ್ದೇವಷ್ಟೇ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿದ್ದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ಕೂಡ ಈ ನಿಯಮದ ಬಗ್ಗೆ ಅತೃಪ್ತಿ ಹೊಂದಿದ್ದಾರೆ.
‘ಆಲ್‌ರೌಂಡರ್‌ಗಳ ಬೆಳವಣಿಗೆಯನ್ನು ಈ ನಿಯಮ ಕುಂಠಿತಗೊಳಿಸುತ್ತದೆ. ಕ್ರಿಕೆಟ್ ಆಟ 11 ಮಮದಿ ಆಡುತ್ತಾರೆ. 12 ಮಂದಿ ಅಲ್ಲ’ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.