ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. 176 ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟಿದ ರಾಜಸ್ಥಾನ ಏಳು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಧ್ರುವ್ ಜುರೇಲ್ ಹೋರಾಟವು (56*) ವ್ಯರ್ಥವೆನಿಸಿತು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಹೈದರಾಬಾದ್ ತಂಡವನ್ನೇ ಮಣಿಸಿದ್ದ ಕೋಲ್ಕತ್ತ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ತಂಡವು ಮೂರನೇ ಬಾರಿ ಫೈನಲ್‌ಗೆ ಪ್ರವೇಶಿಸಿದೆ. 2016ರಲ್ಲಿ ಚಾಂಪಿಯನ್ ಆಗಿದ್ದ ಹೈದರಾಬಾದ್ 2018ರಲ್ಲಿ ರನ್ನರ್ ಅಪ್ ಆಗಿತ್ತು. ಇದಕ್ಕೂ ಮೊದಲು ಡೆಕ್ಕನ್ ಚಾರ್ಜರ್ಸ್, 2009ರಲ್ಲಿ ಟ್ರೋಫಿ ಗೆದ್ದಿತ್ತು.
ಅತಿ ಹೆಚ್ಚು ಸಲ ಫೈನಲ್ ಸಾಧನೆ...
ಚೆನ್ನೈ: 10
ಮುಂಬೈ: 6
ಕೋಲ್ಕತ್ತ: 4
ಬೆಂಗಳೂರು: 3
ಹೈದರಾಬಾದ್: 3
ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಮಿನ್ಸ್ 17 ವಿಕೆಟ್‌ಗಳನ್ನು ಗಳಿಸಿದ್ದಾರೆ. 2008ರಲ್ಲಿ ರಾಜಸ್ಥಾನದ ನಾಯಕರಾಗಿದ್ದ ಶೇನ್ ವಾರ್ನ್ 19 ವಿಕೆಟ್‌ಗಳನ್ನು ಪಡೆದಿದ್ದರು.
2008ರಲ್ಲಿ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ 2022ರಲ್ಲಿ ರನ್ನರ್-ಅಪ್ ಆಗಿತ್ತು. ಇದರೊಂದಿಗೆ ಎರಡನೇ ಸಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. 2013, 2015 ಹಾಗೂ 2018ರಲ್ಲೂ ರಾಜಸ್ಥಾನ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತ್ತು.
ಎಸ್‌ಆರ್‌ಎಚ್ ಸ್ಪಿನ್ ಮೋಡಿ...
ಹೈದರಾಬಾದ್ ಪರ ಶಾಬಾಜ್ ಅಹ್ಮದ್ ಮೂರು ಹಾಗೂ ಅಭಿಷೇಕ್ ಶರ್ಮಾ ಎರಡು ವಿಕೆಟ್ ಗಳಿಸಿ ಮಿಂಚಿದರು. ಮತ್ತೊಂದೆಡೆ ರಾಜಸ್ಥಾನದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ನಾಯಕ ಸಂಜು ಸ್ಯಾಮ್ಸನ್ (10), ರಿಯಾನ್ ಪರಾಗ್ (6), ಶಿಮ್ರಾನ್ ಹೆಟ್ಮೆಯರ್ (4) ಹಾಗೂ ರೋವ್ಮನ್ ಪೊವೆಲ್ (6) ವೈಫಲ್ಯ ಅನುಭವಿಸಿದರು. ಧ್ರುವ್ ಜುರೇಲ್ ಅಜೇಯ 56 ಹಾಗೂ ಯಶಸ್ವಿ ಜೈಸ್ವಾಲ್ 42 ರನ್ ಗಳಿಸಿದರು.
ಕ್ಲಾಸೆನ್, ತ್ರಿಪಾಠಿ ಮಿಂಚು...
ಹೈದರಾಬಾದ್ ಪರ ಸಮಯೋಚಿತ ಬ್ಯಾಟಿಂಗ್ ಕಟ್ಟಿದ ಹೆನ್ರಿಚ್ ಕ್ಲಾಸೆನ್, ಸವಾಲಿನ ಮೊತ್ತ ಪೇರಿಸಲು ನೆರವಾದರು. 34 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಇದಕ್ಕೂ ಮೊದಲು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ 15 ಎಸೆತಗಳಲ್ಲಿ 37 ರನ್ ಗಳಿಸಿ (5 ಬೌಂಡರಿ, 2 ಸಿಕ್ಸರ್) ಭದ್ರ ಅಡಿಪಾಯ ಹಾಕಿಕೊಟ್ಟರು. ರಾಜಸ್ಥಾನದ ಪರ ಟ್ರೆಂಟ್ ಬೌಲ್ಟ್ ಹಾಗೂ ಆವೇಶ್ ಖಾನ್ ತಲಾ ಮೂರು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.