ADVERTISEMENT

IPL 2024 | RCB vs CSK: ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2024, 9:51 IST
Last Updated 17 ಮೇ 2024, 9:51 IST
<div class="paragraphs"><p>ಆರ್‌ಸಿಬಿ ಆಟಗಾರರು</p></div>

ಆರ್‌ಸಿಬಿ ಆಟಗಾರರು

   

(ಪಿಟಿಐ ಚಿತ್ರ)

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ADVERTISEMENT

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ 7.30ಕ್ಕೆ ಸರಿಯಾಗಿ ಪಂದ್ಯ ಆರಂಭವಾಗಲಿದೆ. ಪ್ಲೇ-ಆಫ್‌ಗೆ ಪ್ರವೇಶಿಸುವ ನಿಟ್ಟಿನಲ್ಲಿ ಆರ್‌ಸಿಬಿ ಈ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

ಈ ಪಂದ್ಯಕ್ಕೆ ಮಳೆಯ ಭೀತಿ ಕಾಡುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಶನಿವಾರ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವ ಇದೆ. ಹಾಗೊಂದು ವೇಳೆ ಸಿಎಸ್‌ಕೆ ವಿರುದ್ಧದ ಪಂದ್ಯ ಸೋತರೆ ಅಥವಾ ಮಳೆಯಿಂದಾಗಿ ಪಂದ್ಯ ರದ್ದುಗೊಂಡರೆ ಆರ್‌ಸಿಬಿಯ ಪ್ಲೇ-ಆಫ್ ಕನಸು ಭಗ್ನಗೊಳ್ಳಲಿದೆ.

ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ....

ಆರ್‌ಸಿಬಿ 13 ಪಂದ್ಯಗಳಲ್ಲಿ (6 ಗೆಲುವು, 7 ಸೋಲು) ಒಟ್ಟು 12 ಅಂಕಗಳನ್ನು ಹೊಂದಿದೆ. ಅಲ್ಲದೆ +0.387 ನೇಟ್ ರನ್‌ರೇಟ್ ಕಾಯ್ದುಕೊಂಡಿದೆ. ಮತ್ತೊಂದೆಡೆ ಸಿಎಸ್‌ಕೆ 13 ಪಂದ್ಯಗಳಲ್ಲಿ (7 ಗೆಲುವು, 6 ಸೋಲು) 14 ಅಂಕಗಳನ್ನು ಗಳಿಸಿದ್ದು, +0.528ರ ನೆಟ್ ರನ್‌ರೇಟ್ ಹೊಂದಿದೆ.

ಕೋಲತ್ತ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ-ಆಫ್‌ಗೆ ಪ್ರವೇಶಿಸಿವೆ. ಅಲ್ಲದೆ ನಾಲ್ಕನೇ ಸ್ಥಾನಕ್ಕಾಗಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

ಹಾಗಾಗಿ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆಯನ್ನು ಮಣಿಸುವುದಷ್ಟೇ ಅಲ್ಲದೆ ಅದಕ್ಕಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವುದು ಆರ್‌ಸಿಬಿ ಪಾಲಿಗೆ ಅತ್ಯಂತ ಮುಖ್ಯವೆನಿಸಿದೆ. ಇದಕ್ಕೆ ವರುಣನ ಕೃಪೆಯೂ ಬೇಕಿದೆ.

ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದಲ್ಲಿ ಆರ್‌ಸಿಬಿ ಕನಿಷ್ಠ 18 ರನ್ ಅಂತರದ ಅಥವಾ ಚೇಸಿಂಗ್ ಮಾಡಿದ್ದಲ್ಲಿ 18.1 ಓವರ್‌‌ನಲ್ಲಿ ಗೆಲುವು ದಾಖಲಿಸಬೇಕಿದೆ. ಒಂದು ವೇಳೆ ಆರ್‌ಸಿಬಿ 200 ರನ್ ಗಳಿಸಿದ್ದಲ್ಲಿ ಎದುರಾಳಿ ತಂಡವನ್ನು 182ಕ್ಕೆ ನಿಯಂತ್ರಿಸಬೇಕಿದೆ. ಆ ಮೂಲಕ ಸಿಎಸ್‌ಕೆಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ ನಾಲ್ಕನೇ ತಂಡವಾಗಿ ಪ್ಲೇ-ಆಫ್‌ಗೆ ಲಗ್ಗೆ ಇಡಲಿದೆ.

ಆರ್‌ಸಿಬಿ

ಸತತ 6 ಸೋಲುಗಳ ಬಳಿಕ ಸತತ 5 ಜಯ...

ಟೂರ್ನಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿರುವ ಫಫ್ ಡುಪ್ಲೆಸಿ ಬಳಗವು, ಸತತ ಆರು ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಡಿರುವ ಎಂಟು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ದಾಖಲಿಸಿತ್ತು. ಆದರೆ ಬಳಿಕದ ಐದು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಸನಿಹಕ್ಕೆ ಬಂದು ನಿಂತಿದೆ.

ವಿರಾಟ್ ಕೊಹ್ಲಿ ಟಾಪ್...

ಆರ್‌ಸಿಬಿ ಪುನಶ್ಚೇತನ ಪಡೆಯುವಲ್ಲಿ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ ರನ್‌ ಬೇಟೆಯಲ್ಲಿ (ಆರೆಂಜ್ ಕ್ಯಾಪ್) ಅಗ್ರಸ್ಥಾನದಲ್ಲಿದ್ದಾರೆ. 13 ಪಂದ್ಯಗಳಲ್ಲಿ 66.10ರ ಸರಾಸರಿಯಲ್ಲಿ (155.16 ಸ್ಟ್ರೈಕ್‌ರೇಟ್) 661 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಐದು ಅರ್ಧಶಕಗಳು ಸೇರಿವೆ.

ಒಟ್ಟಿನಲ್ಲಿ ಇತ್ತಂಡಗಳಿಗೂ ಈ ಹೈ ವೋಲ್ಟೇಜ್ ಪಂದ್ಯವು 'ಮಾಡು ಇಲ್ಲವೇ ಮಡಿ' ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಈ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳೂ ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಆರ್‌ಸಿಬಿಯ ಚೊಚ್ಚಲ ಪ್ರಶಸ್ತಿ ಕನಸು ಈ ಬಾರಿಯಾದರೂ ನೆರವೇರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಫಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.