ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಗೆಲ್ಲುವ ಮೂಲಕ ಮೂರನೇ ಬಾರಿಗೆ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು.
ಏಕಪಕ್ಷೀಯವಾದ ಪಂದ್ಯದಲ್ಲಿ ಕೋಲ್ಕತ್ತ ತಂಡವು ಕೇವಲ 10.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಮೈದಾನದ ನಡುವೆ ಸಂಭ್ರಮಿಸುತ್ತಿದ್ದ ತಮ್ಮ ತಂಡದ ಆಟಗಾರರನ್ನು ಕೋಲ್ಕತ್ತ ತಂಡದ ಸಹ ಮಾಲೀಕ, ಬಾಲಿವುಡ್ ತಾರೆ ಶಾರೂಕ್ ಖಾನ್, ಕೋಚ್ ಚಂದ್ರಕಾಂತ್ ಪಂಡಿತ್ ಹಾಗೂ ಗಂಭೀರ್ ಅಭಿನಂದಿಸಿದರು.
ಐಪಿಎಲ್ ಇತಿಹಾಸದಲ್ಲಿ ಕೋಲ್ಕತ್ತ ತಂಡವು ಗೆದ್ದ ಮೂರನೇ ಟ್ರೋಫಿ ಇದಾಗಿದೆ. ಈ ಹಿಂದೆ ಎರಡು ಸಲ ಪ್ರಶಸ್ತಿ ಜಯಿಸಿದಾಗ ಗೌತಮ್ ಗಂಭೀರ್ ನಾಯಕರಾಗಿದ್ದರು. ಇದೀಗ ಅವರು ತಂಡದ ಮೆಂಟರ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ಈ ಸಾಧನೆ ಮಾಡಿದೆ.
ಇನ್ನು, ಈ ಸಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಅವರು ಅತಿಹೆಚ್ಚು ರನ್ ಗಳಿಸುವ ಮೂಲಕ ಆರೇಂಜ್ ಕ್ಯಾಪ್ (741 ರನ್) ತಮ್ಮದಾಗಿಸಿಕೊಂಡು ಮಿಂಚಿದರು.
ಪಂಜಾಬ್ ಕಿಂಗ್ಸ್‌ನ ಹರ್ಷಲ್ ಪಟೇಲ್ ಅವರು ಪರ್ಪಲ್ ಕ್ಯಾಪ್ ಪಡೆದು (24 ವಿಕೆಟ್) ಎಲ್ಲರ ಹುಬ್ಬೇರುವಂತೆ ಮಾಡಿದರು.
ಎಸ್‌ಆರ್‌ಎಚ್‌ನ ನಿತೀಶ್ ಕುಮಾರ್ ರೆಡ್ಡಿ ಅವರು ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಅವರು ಒಟ್ಟು 13 ಪಂದ್ಯಗಳನ್ನು ಆಡಿ 303 ರನ್ ಗಳಿಸಿ ಎಸ್‌ಆರ್‌ಎಚ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆರ್‌ಆರ್‌ನ ಸಂದೀಪ್ ಶರ್ಮಾ, ಎಂಐ ನ ಜಸ್‌ಪ್ರೀತ್ ಭೂಮ್ರಾ, ಎಲ್‌ಎಸ್‌ಜಿಯ ಯಶ್ ಠಾಕೂರ್, ಎಸ್‌ಆರ್‌ಎಚ್‌ನ ಟಿ ನಟರಾಜನ್ ಹಾಗೂ ಚೆನ್ನೈನ ತುಶಾರ್ ದೇಶಪಾಂಡೆ ಈ ಟೂರ್ನಿಯ ಬೆಸ್ಟ್ ಬೌಲರ್‌ಗಳೆಂದು ಪ್ರಶಂಸೆ ಗಳಿಸಿದರು.
ವಿರಾಟ್ ಕೊಹ್ಲಿ, ಹರ್ಷಲ್ ಪಟೇಲ್, ಸುನೀಲ್ ನರೈನ್, ಟ್ರಾವಿಸ್ ಹೆಡ್, ಋತುರಾಜ್ ಗಾಯಕವಾಡ್ ಈ ಟೂರ್ನಿಯ ಬೆಸ್ಟ್ ಆಲ್‌ರೌಂಡರ್ ಎಂದು ಮೆಚ್ಚುಗೆ ಗಳಿಸಿದರು.
ಕೆಕೆಆರ್‌ನ ಸುನೀಲ್ ನರೈನ್ ಅವರು ಈ ಟೂರ್ನಿಯ ಹೆಚ್ಚು ಮೌಲ್ಯಯುತ ಆಟಗಾರ ಎಂದು ಖ್ಯಾತಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.