ಚೆನ್ನೈ: ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶಾಬಾಜ್ ಅಹ್ಮದ್ (23ಕ್ಕೆ3) ಮತ್ತು ಅಭಿಷೇಕ್ ಶರ್ಮಾ (24ಕ್ಕೆ2) ಅವರ ಎಡಗೈ ಸ್ಪಿನ್ ದಾಳಿಯ ನೆರವಿನಿಂದ ಸನ್‌ರೈಸರ್ಸ್ ತಂಡ ಶುಕ್ರವಾರ ನಡೆದ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಸನ್‌ರೈಸರ್ಸ್ ತಂಡ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಲೀಗ್‌ನಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಇವರೆಡು ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.
ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ತಂಡ ಹೆನ್ರಿಚ್ ಕ್ಲಾಸೆನ್ (50; 34ಎ), ರಾಹುಲ್ ತ್ರಿಪಾಠಿ (37; 15ಎ) ಅವರ ಉಪಯುಕ್ತ ಕೊಡುಗೆಯಿಂದ 9 ವಿಕೆಟ್‌ಗೆ 175 ರನ್ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 139 ರನ್‌ಗಳಿಸಲಷ್ಟೇ ಶಕ್ತವಾಯಿತು.
ಶಾಬಾಜ್ ಮತ್ತು ಅಭಿಷೇಕ್ ಇದುವರೆಗಿನ ಪಂದ್ಯಗಳಲ್ಲಿ ಅಂತಹ ಮೋಡಿಯೇನು ಮಾಡಿರಲಿಲ್ಲ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಬ್ಬನಿ ಬಿದ್ದು ಬ್ಯಾಟಿಂಗ್ ಮಾಡುವ ತಂಡಕ್ಕೆ ನೆರವಾಗಬಹುದೆಂಬ ನಾಯಕ ಸಂಜು ಸ್ಯಾಮ್ಸನ್ ನಿರೀಕ್ಷೆ ಹುಸಿಯಾಯಿತು. ಅಭಿಷೇಕ್ ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಬೌಲಿಂಗ್‌ನಲ್ಲಿ ಕೈಚಳಕ ತೋರಿದರು.
ಆರಂಭದಲ್ಲಿ ಜೈಸ್ವಾಲ್ (42;21ಎ) ಮತ್ತು ಧ್ರುವ ಜುರೇಲ್ (ಅಜೇಯ 56, 35ಎ) ಒಂದಿಷ್ಟು ಹೋರಾಟ ತೋರಿದರು. ಒಂದು ಹಂತದಲ್ಲಿ ಎರಡು ವಿಕೆಟ್‌ಗೆ 65 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಯಲ್ಸ್ ನಂತರ ನಿಯಮಿತವಾಗಿ ವಿಕೆಟ್ ಕಳೆದಕೊಳ್ಳುತ್ತ ಹೋಯಿತು. ಮಧ್ಯಮ ಹಂತದಲ್ಲಿ ಶಾಬಾಜ್ ಮತ್ತು ಅಭಿಷೇಕ್ ಶರ್ಮ ಅವರು ರಾಯಲ್ಸ್ ತಂಡಕ್ಕೆ ಹೊಡೆತ ನೀಡಿದರು. ಅದರಂತೆ ಎರಡನೇ ಬಾರಿ ರಾಜಸ್ಥಾನ ರಾಯಲ್ಸ್ ಪ್ರಶಸ್ತಿ ಗೆಲ್ಲುವ ಕನಸು ಕಮರಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ದ ಬ್ಯಾಟರ್‌ಗಳು, ಎಡಗೈ ವೇಗಿ ಟ್ರೆಂಟ್ ಬೌಲ್ಟ್ (45ಕ್ಕೆ3) ಮತ್ತು ಕೊನೆಯ ಓವರ್‌ಗಳಲ್ಲಿ ಮಿಂಚಿದ ಆವೇಶ್ ಖಾನ್ (27ಕ್ಕೆ3) ಅವರ ಬೌಲಿಂಗ್ ಮುಂದೆ ಹೆಚ್ಚು ಅಬ್ಬರಿಸಲು ಸಾಧ್ಯವಾಗಿರಲಿಲ್ಲ.ಟ್ರೆಂಟ್ ಹಾಕಿದ ಮೊದಲ ಓವರ್‌ನಲ್ಲಿಯೇ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಅಭಿಷೇಕ್ ಶರ್ಮಾ ದೊಡ್ಡ ಇನಿಂಗ್ಸ್ ಆಡುವ ಭರವಸೆ ಮೂಡಿಸಿದರು. ಆದರೆ ಅದೇ ಓವರ್‌ನಲ್ಲಿಯೇ ಅವರ ವಿಕೆಟ್ ಪಡೆದ ಟ್ರೆಂಟ್ ‘ಮುಯ್ಯಿ’ ತೀರಿಸಿಕೊಂಡರು.
ಕ್ರೀಸ್‌ಗೆ ಬಂದ ರಾಹುಲ್ ಅವರು ಇನ್ನೊಂದು ಬದಿಯಲ್ಲಿದ್ದ ಟ್ರಾವಿಸ್ ಅವರಿಗಿಂತ ವೇಗವಾಗಿ ರನ್ ಕಲೆಹಾಕಿದರು. ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಇದರಿಂದಾಗಿ ಪವರ್‌ಪ್ಲೇನಲ್ಲಿ ರನ್‌ಗಳು ಹರಿದುಬಂದವು. ಆದರೆ ಐದನೇ ಓವರ್‌ನಲ್ಲಿ ಮತ್ತೆ ಮಿಂಚಿದ ಟ್ರೆಂಟ್ ರಾಹುಲ್ ಹಾಗೂ ಏಡನ್ ಮರ್ಕರಂ ಅವರಿಬ್ಬರ ವಿಕೆಟ್ ಕಬಳಿಸಿದರು. ಇದು ಸನ್‌ರೈಸರ್ಸ್ ಹಿನ್ನಡೆಗೆ ಕಾರಣವಾಯಿತು.
ಮೊತ್ತ ಹೆಚ್ಚಿಸುವ ಹೊಣೆ ಹೊತ್ತು ಆಡಿದ ಹೆಡ್ ಅವರ ವಿಕೆಟ್ ಗಳಿಸುವಲ್ಲಿ ಸಂದೀಪ್ ಶರ್ಮಾ ಯಶಸ್ವಿಯಾದರು. ಹೆಡ್ ಔಟಾದಾಗ ತಂಡದ ಮೊತ್ತ ಇನ್ನೂ ಮೂರಂಕಿ ಮುಟ್ಟಿರಲಿಲ್ಲ. ಈ ಹಂತದಲ್ಲಿ ಹೆನ್ರಿಚ್ ಮತ್ತು ನಿತೀಶ್ ರೆಡ್ಡಿ ಎಚ್ಚರಿಕೆಯ ಆಟವಾಡಿದರು. ಹೊಡಿ ಬಡಿ ಆಟಕ್ಕೆ ಹೆಸರಾದ ಕ್ಲಾಸೆನ್ ಅವರು 147ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳಿದ್ದವು. ಆದರೆ ಒಂದೂ ಬೌಂಡರಿ ಇರಲಿಲ್ಲ. ರೆಡ್ಡಿ ಕೂಡ ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ. 14ನೇ ಓವರ್‌ನಲ್ಲಿ ಆವೇಶ್ ಖಾನ್ ತಮ್ಮ ಕೈಚಳಕ ಮೆರೆದರು. ಸತತ ಎರಡು ಎಸೆತಗಳಲ್ಲಿ ನಿತೀಶ್ ರೆಡ್ಡಿ ಹಾಗೂ ಅಬ್ದುಲ್ ಸಮದ್ ವಿಕೆಟ್ ಕಿತ್ತರು. ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಬಿಗಿ ದಾಳಿ ನಡೆಸಿದ ಸಂದೀಪ್ ಮತ್ತು ಆವೇಶ್ ಕೇವಲ 12 ರನ್ ಕೊಟ್ಟರು. ಮೂರು ವಿಕೆಟ್‌ಗಳು ಪತನವಾದವು.
ಸ್ಪಿನ್ನರ್ ಯಜುವೇಂದ್ರ ಚಾಹಲ್ ಮೂರು ಕ್ಯಾಚ್ ಪಡೆದು ಮಿಂಚಿದರು. ಆದರೆ ಬೌಲಿಂಗ್‌ನಲ್ಲಿ ಒಂದೂ ವಿಕೆಟ್ ಗಳಿಸಲಿಲ್ಲ. ರಾಹುಲ್ ತ್ರಿಪಾಠಿ, ಮರ್ಕರಂ ಹಾಗೂ ರೆಡ್ಡಿ ಅವರ ಕ್ಯಾಚ್‌ಗಳನ್ನು ಹಿಡಿತಕ್ಕೆ ಪಡೆದ ಚಾಹಲ್ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.