ADVERTISEMENT

ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಏಕಪಕ್ಷೀಯವಾದ ಪಂದ್ಯದಲ್ಲಿ ಲಖನೌಗೆ ‘ಸನ್‌ ಸ್ಟ್ರೋಕ್‌’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2024, 13:34 IST
Last Updated 8 ಮೇ 2024, 13:34 IST
<div class="paragraphs"><p>ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ</p></div>

ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ

   

(ಪಿಟಿಐ ಚಿತ್ರ)

ಹೈದರಾಬಾದ್: ಲಖನೌ ಸೂಪರ್‌ ಜೈಂಟ್ಸ್‌ ದಾಳಿ ಲೆಕ್ಕಕ್ಕೇ ಇಲ್ಲ ಎನ್ನುವಂತೆ  ಆಡಿದ ಸನ್‌ರೈಸರ್ಸ್‌ ಹೈದರಾಬಾದ್ ಆರಂಭ ಆಟಗಾರರಾದ ಟ್ರಾವಿಸ್‌ ಹೆಡ್‌ (ಔಟಾಗದೇ 89, 30 ಎಸೆತ) ಮತ್ತು ಅಭಿಷೇಕ್‌ ಶರ್ಮಾ (ಔಟಾಗದೇ 75, 28 ಎಸೆತ ) ಅವರು ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಗರೆದರು. ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್ ತಂಡ 166 ರನ್‌ಗಳ ಗುರಿಯನ್ನು ವಿಕೆಟ್‌ ಕಳೆದುಕೊಳ್ಳದೇ ಬರೇ 9.4 ಓವರುಗಳಲ್ಲಿ ತಲುಪಿತು.

ADVERTISEMENT

ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಸಂಪೂರ್ಣ ಏಕಪಕ್ಷೀಯವಾಯಿತು. ಈ ಗೆಲುವಿನೊಡನೆ ಹೈದರಾಬಾದ್ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿ ಪ್ಲೇ ಆಫ್ ಸ್ಥಾನದ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿತು. ಎಲ್‌ಎಸ್‌ಜಿ ಆರನೇ ಸ್ಥಾನದಲ್ಲೇ ಉಳಿಯಿತು.

ಮೊದಲು ಬ್ಯಾಟ್‌ ಮಾಡಿದ ಲಖನೌ ಆಟ ಆರಂಭದಲ್ಲಿ ನೀರಸವಾಗಿತ್ತು. ಒಂದು ಹಂತದಲ್ಲಿ 11.2 ಓವರುಗಳಲ್ಲಿ 4 ವಿಕೆಟ್‌ಗೆ 66 ರನ್ ಗಳಿಸಿದ್ದ ತಂಡ ನಿಕೋಲಸ್ ಪೂರನ್ (ಔಟಾಗದೇ 48, 25ಎ, 4x6, 6x1) ಮತ್ತು ಆಯುಷ್‌ ಬಡೋನಿ (ಔಟಾಗದೇ 55, 30ಎ, 4x9) ಅವರ ನಡುವಣ ಮುರಿಯದ 99 ರನ್‌ಗಳ (55 ಎಸೆತ) ಐದನೇ ವಿಕೆಟ್‌ ಜೊತೆಯಾಟದಿಂದ 4 ವಿಕೆಟ್‌ಗೆ 164 ರನ್ ಗಳಿಸಲು ಸಾಧ್ಯವಾಯಿತು.

ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಹೈದರಾಬಾದ್ ತಂಡ ಪವರ್‌ಪ್ಲೇ ಮುಗಿಯುವಷ್ಟರಲ್ಲಿ ವಿಕೆಟ್‌ ನಷ್ಟವಿಲ್ಲದೇ 107 ರನ್ ಚಚ್ಚಿತು. ಯಾವುದೇ ಬೌಲರ್‌ಗಳಿಗೆ ರಿಯಾಯಿತಿ ತೋರಲಿಲ್ಲ.  ಲಖನೌ ಬೌಲಿಂಗ್ ಆರಂಭಿಸಿದ್ದ ಕೆ.ಗೌತಮ್ 2 ಓವರುಗಳಲ್ಲಿ 29 ರನ್ ನೀಡಿದ್ದೇ ಕಡಿಮೆ ಎನಿಸಿತು! ಸ್ಫೋಟಕ ಇನಿಂಗ್ಸ್‌ ಆಡಿದ ಹೆಡ್‌ ಅವರು ಎಂಟು ಸಿಕ್ಸರ್‌, ಎಂಟು ಬೌಂಡರಿ ಸಿಡಿಸಿದರು. ತಾವೇನೂ ಕಡಿಮೆಯಿಲ್ಲ ಎಂಬಂತೆ ಅಭಿಷೇಕ್ ಎಂಟು ಬೌಂಡರಿ, ಅರ್ಧ ಡಜನ್ ಸಿಕ್ಸರ್‌ ಹೊಡೆದರು.

ಹೆಡ್‌ ಕೆಲ ಅಮೋಘ ಇನಿಂಗ್ಸ್‌ಗಳ ಮೂಲಕ ಈ ಬಾರಿಯ ಲೀಗ್‌ನಲ್ಲಿ 533 ರನ್ ಗಳಿಸಿದಂತಾಗಿದೆ. ವಿರಾಟ್‌ ಕೊಹ್ಲಿ (542) ಮತ್ತು ಋತುರಾಜ್ ಗಾಯಕವಾಡ್ (541) ಅವರಿಗಿಂತ ಮುಂದಿದ್ದಾರೆ.

ಸನ್‌ರೈಸರ್ಸ್‌ ತದ್ವಿರುದ್ಧ ಎಂಬಂತೆ ಲಖನೌ ತಂಡ ತೀರಾ ನಿಧಾನಗತಿಯ ಆರಂಭ ಮಾಡಿತ್ತು. ಪವರ್‌ಪ್ಲೇ ನಂತರ ಲಖನೌ ಮೊತ್ತ 2 ವಿಕೆಟ್‌ಗೆ 27. ಕ್ವಿಂಟನ್‌ ಡಿಕಾಕ್‌ ಮತ್ತು ಮಾರ್ಕಸ್‌ ಸ್ಟೊಯಿನಿಸ್‌, ಭುವನೇಶ್ವರ ಕುಮಾರ್‌ (4–0–12–2) ಅವರ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಆದರೆ ಇದರ ಶ್ರೇಯಸ್ಸು ಉತ್ತಮ ಕ್ಯಾಚ್‌ ಪಡೆದ (ಕ್ರಮವಾಗಿ) ನಿತೀಶ್ ಕುಮಾರ್ ರೆಡ್ಡಿ ಮತ್ತು ಸನ್ವೀರ್‌ ಸಿಂಗ್ ಅವರಿಗೂ ಸಲ್ಲಬೇಕು.

ನಾಯಕ ಕೆ.ಎಲ್‌.ರಾಹುಲ್ (29) ಮತ್ತು ಕೃಣಾಲ್ ಪಾಂಡ್ಯ (24) ಚೇತರಿಕೆ ಒದಗಿಸಿದರು. ರಾಹುಲ್ ಅವರ ಆಟ ಎಂದಿನಂತಿರಲಿಲ್ಲ. ತೆವಳುತ್ತ ಸಾಗಿದ ಅವರು ತಮ್ಮ ಮೊದಲ ಬೌಂಡರಿ ಗಳಿಸಿದ್ದೇ 10ನೇ ಓವರಿನಲ್ಲಿ– ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಮಿಡ್‌ ಆಫ್‌ ಮೇಲಿಂದ ಅದನ್ನು ಗಳಿಸಿದರು. ಅದೇ ಓವರಿನಲ್ಲಿ ಟಿ.ನಟರಾಜನ್‌ ಅವರಿಗೆ ಬ್ಯಾಕ್‌ವರ್ಡ್‌ ಸ್ಕ್ವೇರ್‌ಲೆಗ್‌ ಬೌಂಡರಿ ಬಳಿ ಕ್ಯಾಚಿತ್ತರು.

ಅತಿಥೇಯ ಸನ್‌ರೈಸರ್ಸ್ ತಂಡವು ತನ್ನ ಬಲಾಢ್ಯ ಬ್ಯಾಟಿಂಗ್ ನೆಚ್ಚಿಕೊಂಡು ಕಣಕ್ಕಿಳಿದಿದೆ. ಉಭಯ ತಂಡಗಳೂ ತಲಾ 11 ಪಂದ್ಯಗಳಲ್ಲಿ ಆಡಿ 12 ಅಂಕ ಗಳಿಸಿವೆ. ಸನ್‌ರೈಸರ್ಸ್ ತಂಡವು ನೆಟ್‌ ರನ್‌ರೇಟ್‌ನಲ್ಲಿ ಸ್ವಲ್ಪ ಹೆಚ್ಚು ಇರುವುದರಿಂದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಲಖನೌ ಆರನೇ ಸ್ಥಾನದಲ್ಲಿದೆ.

ಪ್ಯಾಟ್‌ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಈ ಬಾರಿಯ ಟೂರ್ನಿಯಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದೆ. ಆದರೆ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತಿತು. ಟ್ರಾವಿಸ್ ಹೆಡ್ ಅವರು ಉತ್ತಮ ಲಯದಲ್ಲಿದ್ದಾರೆ. ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ ಅವರ ಆಟದಲ್ಲಿಯೂ ಸ್ಥಿರತೆ ಇಲ್ಲ. ಬೌಲಿಂಗ್‌ನಲ್ಲಿ ಟಿ. ನಟರಾಜನ್, ಭುವನೇಶ್ವರ್ ಕುಮಾರ್ ಅವರು ಉತ್ತ ಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. 

ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವೂ ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಸೋತಿತ್ತು. ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೊಲಸ್ ಪೂರನ್ ಆಟದಲ್ಲಿ ಸ್ಥಿರತೆ ಇಲ್ಲ. ಆಯುಷ್ ಬದೋನಿ ಲಯಕ್ಕೆ ಮರಳಬೇಕಿದೆ. ನವೀನ್ ಉಲ್ ಹಕ್, ಯಶ್ ಠಾಕೂರ್, ಸ್ಪಿನ್ನರ್ ಕೃಣಾಲ್ ಪಾಂಡ್ಯ ಹಾಗೂ ರವಿ ಬಿಷ್ಣೋಯಿ ಅವರು ಬೌಲಿಂಗ್ ಹೊಣೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.