ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆ ಹೊಂದಿರುವ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಅವರು 2025ರಲ್ಲಿ ನಡೆಯುವ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇದೇ ವರ್ಷ ಜುಲೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ 42 ವರ್ಷದ 'ಜಿಮ್ಮಿ', ಅದಾದ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ತವರಿನ ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ವಿದಾಯದ ಪಂದ್ಯವಾಡಿದ್ದರು.
₹1.25 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನಂಗಳಕ್ಕೆ ಬಂದಿರುವ ಇವರು ಕಳೆದ 15 ವರ್ಷಗಳಲ್ಲಿ (2009 ರಿಂದ) ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ. ಒಮ್ಮೆಯೂ ಐಪಿಎಲ್‌ನಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಇದೇ 24 ಮತ್ತು 25 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ ಎರಡನೇ ಬಾರಿಗೆ ಐಪಿಎಲ್ ಬಿಡ್ ವಿದೇಶದಲ್ಲಿ ನಡೆದಂತಾಗಲಿದೆ.
ಹೋದ ವರ್ಷ ದುಬೈನಲ್ಲಿ ಆಯೋಜನೆಯಾಗಿತ್ತು.
ಒಟ್ಟು 1,524 ಕ್ರಿಕೆಟಿಗರು ಹರಾಜಿಗೆ ಲಭ್ಯರಿದ್ದಾರೆ. ಅವರಲ್ಲಿ 1,165 ಮಂದಿ ಭಾರತದವರು.
ಈಗಾಗಲೇ ಉಳಿಸಿಕೊಂಡಿರುವ (ರಿಟೇನಡ್) ಆಟಗಾರರು ಸೇರಿದಂತೆ ಪ್ರತಿ ತಂಡವೂ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಈ ಬಾರಿಯ ಬಿಡ್‌ನಲ್ಲಿ 204 ಆಟಗಾರರ ಖರೀದಿಗೆ ಅವಕಾಶವಿದೆ. ಸದ್ಯ ಎಲ್ಲ 10 ತಂಡಗಳು ಒಟ್ಟು 46 ಆಟಗಾರರನ್ನು ಉಳಿಸಿಕೊಂಡಿವೆ.
ಆ್ಯಂಡರ್ಸನ್ ಸಾಧನೆ
ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ 42 ವರ್ಷದ ಆ್ಯಂಡರ್‌ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕಿಂತ ಅಧಿಕ ವಿಕೆಟ್ ಪಡೆದ ಏಕೈಕ ವೇಗಿ ಎನಿಸಿದ್ದಾರೆ.
2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್, 188 ಪಂದ್ಯಗಳಲ್ಲಿ 704 ವಿಕೆಟ್ ಗಳಿಸಿದ್ದಾರೆ. ಆ ಮೂಲಕ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ (708) ನಂತರದ ಸ್ಥಾನದಲ್ಲಿದ್ದಾರೆ.
194 ಏಕದಿನ ಪಂದ್ಯಗಳಿಂದ 269 ವಿಕೆಟ್ ಹಾಗೂ 19 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.